ಮೀನು ಮಾರುತ್ತಿದ್ದ ವ್ಯಕ್ತಿಯನ್ನು ಥಳಿಸಿದ ನಾಲ್ವರು ದುಷ್ಕರ್ಮಿಗಳು ಸ್ಟೀಲ್ ರಾಡ್ನಿಂದ ಆತನ ಕಣ್ಣನ್ನು ಕಿತ್ತು ಬಳಿಕ ಎರಡು ಅಂತಸ್ತಿನ ಮನೆಯಿಂದ ಎಸೆದ ಬೆಚ್ಚಿ ಬೀಳಿಸುವ ಘಟನೆ ಉತ್ತರಾಖಂಡ್ನ ನೈನಿತಾಲ್ ಜಿಲ್ಲೆಯಲ್ಲಿ ನಡೆದಿದೆ. ಎಂಟು ದಿನಗಳ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಮೀನು ಮಾರಾಟಗಾರ ಕೊನೆಯುಸಿರೆಳೆದಿದ್ದಾನೆ.
ಮೃತ ಮೀನು ಮಾರಾಟಗಾರರನ್ನು 33 ವರ್ಷದ ಭಗವಾನ್ ಸಿಂಗ್ ಪಡಿಯಾರ್ ಎಂದು ಗುರುತಿಸಲಾಗಿದೆ. ಈತ ಟೋಕ್ ನರ್ತೋಲಾ ಗ್ರಾಮದಲ್ಲಿ ಮೀನು ಮಾರಾಟ ಮಾಡುತ್ತಿದ್ದನು. ನವೆಂಬರ್ 2ರ ಸಂಜೆ ಸುಮಾರಿಗೆ ನಾಲ್ವರು ಮೀನು ಖರೀದಿ ಮಾಡಲು ಈತನ ಅಂಗಡಿ ಬಳಿ ಆಗಮಿಸಿದ್ದರು. ಮೀನು ಖರೀದಿಸಿದ ನಾಲ್ವರು ಹಣ ಪಾವತಿಸಲು ಸಿದ್ಧರಿರಲಿಲ್ಲ. ಆದರೆ ಇದಕ್ಕೆ ಭಗವಾನ್ ಒಪ್ಪದ ಕಾರಣ ಜಗಳ ತಾರಕಕ್ಕೇರಿತ್ತು.
ಭಗವಾನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ನಾಲ್ವರು ಕಿರಾತಕರು ಸ್ಟೀಲ್ ರಾಡ್ ಬಳಸಿ ಆತನ ಕಣ್ಣುಗಳನ್ನು ಕಿತ್ತೆಸೆದಿದ್ದಾರೆ. ಬಳಿಕ ಆತನನ್ನು ಎರಡು ಅಂತಸ್ತಿನ ಮನೆಯ ಛಾವಣಿಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಆತನನ್ನು ಕೆಳಗೆ ಎಸೆದಿದ್ದಾರೆ. ಇದಾದ ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು.
ಸಾವಿನ ದವಡೆಯಲ್ಲಿದ್ದ ಭಗವಾನ್ರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂಟು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ ಸಾವನ್ನಪ್ಪಿದ್ದಾನೆ.
ಭಗವಾನ್ ಮಾವ ಗಣೇಶ್ ಸಿಂಗ್ ಎಂಬವರು ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ. ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಕೌಶಲ್ ಸಿಂಗ್, ಸುನೀಲ್ ಜೋಶಿ, ಭೂಪಾಲ್ ಸಿಂಗ್ ಹಾಗೂ ಚಂಚಲ್ ಸಿಂಗ್ ಎಂದು ಗುರುತಿಸಲಾಗಿದೆ. ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.