ಹರ್ಮಿಟ್ ಆಫ್ ಟ್ರೀಗ್ ಎಂದು ಕರೆಯಲ್ಪಡುವ 72 ವರ್ಷದ ಕೆನ್ ಸ್ಮಿತ್ ಎಂಬ ವ್ಯಕ್ತಿ ಸುಮಾರು 40 ವರ್ಷಗಳ ಕಾಲ ಸ್ಕಾಟಿಷ್ ಹೈಲ್ಯಾಂಡ್ಸ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ.
ವಿದ್ಯುತ್ ಸಂಪರ್ಕವಿಲ್ಲದೆ ತಮ್ಮ ಕೈಯಿಂದ ಮರದ ದಿಮ್ಮಿಗಳಿಂದ ತಯಾರಿಸಿದ ಮನೆಯನ್ನು ನಿರ್ಮಿಸಿದ್ದು (ಲಾಗ್ ಕ್ಯಾಬಿನ್), ಅದರಲ್ಲೇ ವಾಸಿಸುತ್ತಿದ್ದಾರೆ. ಚಲನಚಿತ್ರ ನಿರ್ಮಾಪಕ ಲಿಜ್ಜೀ ಮೆಕೆಂಜಿ ಸಾಕ್ಷ್ಯಚಿತ್ರವನ್ನು ಮಾಡಿದ ನಂತರ ಸ್ಮಿತ್ ಕಥೆ ಬೆಳಕಿಗೆ ಬಂದಿದೆ. ಚಲನಚಿತ್ರ ನಿರ್ಮಾಪಕರು ಒಂಬತ್ತು ವರ್ಷಗಳ ಹಿಂದೆ ಸ್ಮಿತ್ ಅವರನ್ನು ಭೇಟಿ ಮಾಡಿದ್ದರು. ಕಳೆದ ಎರಡು ವರ್ಷಗಳಲ್ಲಿ ಅವರು ಅವರನ್ನು ಬಿಬಿಸಿ ಸ್ಕಾಟ್ಲೆಂಡ್ ಸಾಕ್ಷ್ಯಚಿತ್ರಕ್ಕಾಗಿ ಚಿತ್ರೀಕರಿಸಿದ್ದಾರೆ.
ಬಿಬಿಸಿ ಸಾಕ್ಷ್ಯಚಿತ್ರ ದಿ ಹರ್ಮಿಟ್ ಆಫ್ ಟ್ರೀಗ್ ನಲ್ಲಿ, ಸ್ಮಿತ್ ಅವರು 26 ನೇ ವಯಸ್ಸಿನಲ್ಲಿ ದಾಳಿಯನ್ನು ಎದುರಿಸಿದಾಗ ಅವರ ಜೀವನ ಬದಲಾಯಿತು ಎಂದು ವಿವರಿಸಲಾಗಿದೆ. ತಮ್ಮ 26ನೇ ವಯಸ್ಸಿನಲ್ಲಿ ಗುಂಪೊಂದರಿಂದ ಸ್ಮಿತ್ ದಾಳಿಗೊಳಗಾಗಿದ್ದರು. ದಾಳಿಯ ನಂತರ, ಸ್ಮಿತ್ ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದರು. ಇದರಿಂದ 23 ದಿನಗಳವರೆಗೆ ಪ್ರಜ್ಞಾಹೀನರಾಗಿದ್ದರು. ಅವರಿಗೆ ಮಾತನಾಡಲು ಅಥವಾ ನಡೆಯಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ಹೇಳಿದ್ದರು.
ಡರ್ಬಿಶೈರ್‌ನಿಂದ ಬಂದಿರುವ ಸ್ಮಿತ್ ಅವರು 15 ನೇ ವಯಸ್ಸಿನಲ್ಲಿ ಅಗ್ನಿಶಾಮಕ ಕೇಂದ್ರಗಳನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದರಂತೆ. ದಾಳಿಯ ನಂತರ, ಸ್ಮಿತ್ ಅವರು ಅರಣ್ಯದ ಕಲ್ಪನೆಯಿಂದ ಪ್ರೇರೇಪಿತಗೊಂಡು ಕೆನಡಾಕ್ಕೆ ಪ್ರಯಾಣ ಬೆಳೆಸಿದ್ದರಂತೆ. 22,000 ಮೈಲುಗಳಷ್ಟು ದೂರ ನಡೆದ ಇವರು, ಮನೆಗೆ ಹಿಂದಿರುಗಿದಾಗ ತನ್ನ ಹೆತ್ತವರು ಸತ್ತ ವಿಷಯ ತಿಳಿದು ಆಘಾತಕ್ಕೊಳಗಾಗಿದ್ದರು.
ಹೀಗಾಗಿ ಎಲ್ಲಿ ಹೋಗಬೇಕು ಎಂದು ತಿಳಿಯದ ಸ್ಮಿತ್ ನಡೆಯುತ್ತಾ ಸಾಗಿದ್ರು. ದಾರಿಯುದ್ದಕ್ಕೂ ಇವರು ಅಳುತ್ತಾ ಸಾಗಿದ್ದಾರೆ. ಎಲ್ಲಿ ಹೋಗಬೇಕು, ಏನು ಮಾಡಬೇಕು ಎಂಬ ಗೊತ್ತು ಗುರಿಯಿಲ್ಲದೆ ನಡೆಯುತ್ತಾ ಸಾಗಿದಾಗ ನೋಡಿದ್ದು, ಕಾಡು ಪ್ರದೇಶವನ್ನು.
ತಮ್ಮ ಕಣ್ಣೀರನ್ನು ಒರೆಸುತ್ತಾ, ತನಗೆ ತಾನೇ ಸಂತೈಸುತ್ತಾ ಅಂತಿಮವಾಗಿ ಕಾಡಿನಲ್ಲೇ ಜೀವನ ಬಂಡಿ ಎಳೆಯಲು ತೀರ್ಮಾನಿಸಿದ್ದಾರೆ. ಅರಣ್ಯದಲ್ಲಿ ವಾಸಿಸಲು ಸ್ಮಿತ್ ಸ್ವತಃ ಮರದ ದಿಮ್ಮಿಗಳಿಂದ ತಯಾರಿಸಿದ ಪುಟ್ಟ ಮನೆಯನ್ನು ನಿರ್ಮಿಸಿದ್ದಾರೆ. ಕಾಡಿನಲ್ಲಿ ಅವರು ತರಕಾರಿಗಳನ್ನು ಕೂಡ ಬೆಳೆಯುತ್ತಾರೆ. ಅಷ್ಟೇ ಅಲ್ಲ ಇವರು ಬಿಯರ್ ಮತ್ತು ವೈನ್ ಅನ್ನು ಸಹ ತಯಾರಿಸುತ್ತಾರೆ. ಅವರು ಮನೆಯಲ್ಲಿ ತಾವೇ ತಯಾರಿಸಿದ 80 ಗ್ಯಾಲನ್ ವೈನ್ ಅನ್ನು ಸಂಗ್ರಹಿಸಿದ್ದಾರೆ.