ನೌಕರರ ಭವಿಷ್ಯ ನಿಧಿ ಸಂಸ್ಥೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಇಪಿಎಫ್ಒ ನೌಕರರು ಮತ್ತು ಕುಟುಂಬಸ್ಥರಿಗೆ ಪರಿಹಾರ ನೀಡಲು ನಿರ್ಧರಿಸಿದೆ. ಇಪಿಎಫ್‌ಒ ಸಿಬ್ಬಂದಿಯ ಹಠಾತ್ ನಿಧನದ ಸಂದರ್ಭದಲ್ಲಿ ಸಂಬಂಧಿಕರಿಗೆ ನೀಡಲಾಗುವ ಎಕ್ಸ್-ಗ್ರೇಷಿಯಾ ಡೆತ್ ರಿಲೀಫ್ ಫಂಡ್‌ನ ಮೊತ್ತವನ್ನು ಕೇಂದ್ರೀಯ ಮಂಡಳಿ ದ್ವಿಗುಣಗೊಳಿಸಿದೆ. ದೇಶಾದ್ಯಂತ ಸಂಸ್ಥೆಯ 30 ಸಾವಿರ ಉದ್ಯೋಗಿಗಳಿಗೆ ಇದ್ರಿಂದ ಅನುಕೂಲವಾಗಲಿದೆ. ಈ ಬಗ್ಗೆ ಇಪಿಎಫ್‌ಒ ಎಲ್ಲಾ ಕಚೇರಿಗಳಿಗೂ ಸುತ್ತೋಲೆ ಹೊರಡಿಸಿದೆ.
ಕೊರೊನಾ ವೈರಸ್‌ನಿಂದ ಸಾವಿಗೀಡಾದವರಿಗೆ ಇದ್ರ ಲಾಭ ಸಿಗುವುದಿಲ್ಲವೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಇಪಿಎಫ್‌ಒ ಉದ್ಯೋಗಿಯ ಆಕಸ್ಮಿಕ ಮರಣದ ನಂತರ, ಅವಲಂಬಿತರು 8 ಲಕ್ಷ ರೂಪಾಯಿಗಳನ್ನು ಪಡೆಯಲಿದ್ದಾರೆ. ಈ ಹಿಂದೆ ಅಂದ್ರೆ 2006ರಲ್ಲಿ ಕೇವಲ 5000 ರೂಪಾಯಿ ಸಿಗ್ತಿತ್ತು. ಇದಾದ ಬಳಿಕ 50 ಸಾವಿರದಿಂದ 4.20 ಲಕ್ಷ ರೂಪಾಯಿಗೆ ಹೆಚ್ಚಿಸಲಾಯಿತು. ಈಗ ಪ್ರತಿ ಮೂರು ವರ್ಷಕ್ಕೊಮ್ಮೆ ಅದನ್ನು ಶೇಕಡಾ10ರಷ್ಟು ಹೆಚ್ಚಿಸುವ ಪ್ರಯತ್ನ ನಡೆದಿದೆ. ನೌಕರ ಆಕಸ್ಮಿಕವಾಗಿ ಸಾವನ್ನಪ್ಪಿದರೆ ಕನಿಷ್ಠ 10 ರಿಂದ ಗರಿಷ್ಠ 20 ಲಕ್ಷ ರೂಪಾಯಿ ನೀಡುವಂತೆ ಸದಸ್ಯರು ಬೇಡಿಕೆ ಇಟ್ಟಿದ್ದರು.
ಕಲ್ಯಾಣ ನಿಧಿಯಿಂದ ಈ ಮೊತ್ತವನ್ನು ನೀಡಲಾಗುವುದು. ಕೇಂದ್ರ ಭವಿಷ್ಯ ನಿಧಿ ಆಯುಕ್ತರು, ಕೇಂದ್ರ ಸಿಬ್ಬಂದಿ ಕಲ್ಯಾಣ ಸಮಿತಿ ಮತ್ತು ಉದ್ಯೋಗಿಗಳ ಭವಿಷ್ಯ ನಿಧಿಯ ಅನುಮೋದನೆಯೊಂದಿಗೆ ಈ ಮೊತ್ತವನ್ನು ಹೆಚ್ಚಿಸಲಾಗಿದೆ.