ಹರಿಯಾಣದ ಸೋನೆಪತ್ನ ಹಲಾಲ್ಪುರದಲ್ಲಿರುವ ಸುಶೀಲ್ ಕುಮಾರ್ ಕುಸ್ತಿ ಅಕಾಡೆಮಿಯಲ್ಲಿ ದುಷ್ಕರ್ಮಿಗಳು ರಾಷ್ಟ್ರ ಮಟ್ಟದ ಕುಸ್ತಿಪಟು ನಿಶಾ ದಹಿಯಾ ಹಾಗೂ ಅವರ ಸಹೋದರನನ್ನು ಕೊಲೆಯಾಗಿದ್ದಾರೆ ಎಂಬ ವದಂತಿಗೆ ಸ್ವತಃ ನಿಶಾ ದಹಿಯಾ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ವಿಡಿಯೋ ರಿಲೀಸ್ ಮಾಡಿರುವ ನಿಶಾ ದಹಿಯಾ ನನಗೇನು ಆಗಿಲ್ಲ. ನಾನು ಆರಾಮಾಗಿಯೇ ಇದ್ದೇನೆ ಎಂದು ಹೇಳಿದ್ದಾರೆ. ಕೆಲ ನಿಮಿಷಗಳ ಹಿಂದಷ್ಟೇ.. ಸುಶೀಲ್ ಕುಮಾರ್ ಕುಸ್ತಿ ಅಕಾಡೆಮಿಯಲ್ಲಿ ನಡೆದ ದುಷ್ಕರ್ಮಿಗಳ ದಾಳಿಯಲ್ಲಿ ನಿಶಾ ದಹಿಯಾ ಹಾಗೂ ಅವರ ಸಹೋದರ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ವ್ಯಾಪಕವಾಗಿ ಹರಡಿತ್ತು.
ಶುಕ್ರವಾರದಂದು ನಿಶಾ ದಹಿಯಾ ಯು 23 ವರ್ಲ್ಡ್ ಚಾಂಪಿಯನ್ ಶಿಪ್ನ 65 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಸಂಪಾದಿಸಿದ್ದಾರೆ. ನಿಶಾ ದಹಿಯಾರ ಉತ್ತಮ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಕೂಡ ಮೆಚ್ಚುಗೆ ಸೂಚಿಸಿದ್ದರು.
ಈ ಸಂಬಂಧ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ – ಶಿವಾನಿ, ಅಂಜು, ದಿವ್ಯಾ ಹಾಗೂ ನಿಶಾರಿಗೆ ನನ್ನ ಅಭಿನಂದನೆಗಳು. ಬೆಲ್ಗ್ರೇಡ್ನ ಕುಸ್ತಿ ಚಾಂಪಿಯನ್ ಶಿಪ್ನಲ್ಲಿ ಪದಕವನ್ನು ಸಂಪಾದಿಸಿದ್ದೀರಾ. ನಿಮ್ಮ ಪ್ರದರ್ಶನವು ವಿಶೇಷವಾಗಿತ್ತು ಹಾಗೂ ಭಾರತದಲ್ಲಿ ಕುಸ್ತಿ ಕ್ಷೇತ್ರವನ್ನು ಇನ್ನಷ್ಟು ಪ್ರಸಿದ್ಧಗೊಳಿಸಲು ಮತ್ತಷ್ಟು ಕೊಡುಗೆ ನೀಡೋದಾಗಿ ಬರೆದಿದ್ದರು.
ನಿಶಾ ದಹಿಯಾ 2014ರಲ್ಲಿ ಶ್ರೀನಗರದಲ್ಲಿ ನಡೆದ ಕೆಡೆಟ್ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಸಂಪಾದಿಸಿದ್ದರು. ಮಾರನೇ ವರ್ಷವು ತಮ್ಮ ಈ ಸಾಧನೆಯನ್ನು ಮುಂದುವರಿಸಿದ್ದರು. 2014ರಲ್ಲಿ ಏಷಿಯನ್ ಚಾಂಪಿಯನ್ ಶಿಪ್ನ 49 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಕಬಳಿಸುವ ಮೂಲಕ ಮೊದಲ ಅಂತಾರಾಷ್ಟ್ರೀಯ ಪದಕಕ್ಕೆ ಮುತ್ತಿಟ್ಟಿದ್ದರು. ಮಾರನೇ ವರ್ಷ 60 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು. 2015ರ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದರು.
ಕಂಚಿನ ಪದಕ ಸಂಪಾದಿಸಿದ ಬಳಿಕ ನಿಶಾ ಮೇಲೆ ಉದ್ದೀಪನ ಮದ್ದು ಸೇವನೆ ಆರೋಪ ಸಾಬೀತಾಗಿತ್ತು. ಹೀಗಾಗಿ ಅವರು ನಾಲ್ಕು ವರ್ಷಗಳ ಕಾಲ ನಿಷೇಧಕ್ಕೆ ಒಳಪಡಬೇಕಾಗಿ ಬಂದಿತ್ತು. ಇನ್ನೇನು ರೈಲ್ವೆ ಇಲಾಖೆಯಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಬೇಕಿದ್ದ ನಿಶಾ ಉದ್ದೀಪನ ಮದ್ದು ಸೇವನೆಯಿಂದಾಗಿ ಆ ಅವಕಾಶವನ್ನು ಕಳೆದುಕೊಂಡರು. 2019ರಲ್ಲಿ ಮತ್ತೆ ಕುಸ್ತಿ ಅಖಾಡಕ್ಕೆ ಮರಳಿದ್ದ ನಿಶಾ ಯು 23 ನ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಸಂಪಾದಿಸಿದ್ದಾರೆ.
https://www.instagram.com/p/CWGNBcnJ4iA/?utm_source=ig_web_copy_link