ವೈದ್ಯೋ ನಾರಾಯಣೋ ಹರಿಃ ಅಂತಾರೆ. ಆದರೆ ಇಲ್ಲೊಬ್ಬ ದಂತ ವೈದ್ಯ ಮಾತ್ರ ಈ ಮಾತಿಗೆ ವಿರುದ್ಧವಾಗಿ ವರ್ತಿಸಿದ್ದಾನೆ.
ಹಲ್ಲು ನೋವೆಂದು ಕ್ಲಿನಿಕ್ಗೆ ಬಂದಿದ್ದ 32 ವರ್ಷದ ಮಹಿಳೆಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ನೀಡಿ ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಇದು ಮಾತ್ರವಲ್ಲದೇ ಈ ಅಶ್ಲೀಲ ದೃಶ್ಯದ ವಿಡಿಯೋವನ್ನೂ ಚಿತ್ರಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ.
ಹಲ್ಲುನೋವಿನಿಂದ ಬಳಲುತ್ತಿದ್ದ ಸಂತ್ರಸ್ತೆ ಉತ್ತರ ಪ್ರದೇಶದ ಸೈದ್ಪುರ ಬಳಿ ಆಸ್ಪತ್ರೆಗೆ ಅಕ್ಟೋಬರ್ 16ರಂದು ತೆರಳಿದ್ದರು. ಹಲ್ಲಿನ ಪರಿಶೀಲನೆ ನಡೆಸಿದ ವೈದ್ಯ ಹಲ್ಲು ಕೀಳಿಸಬೇಕು ಎಂದು ಹೇಳಿದ್ದಾನೆ.
ಇದಾಗಿ ಕೆಲ ದಿನಗಳ ಬಳಿಕ ಸಂತ್ರಸ್ತೆ ಮತ್ತೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿದ್ದಾಳೆ. ಈ ವೇಳೆ ಆಕೆಗೆ ಹಲ್ಲು ಕೀಳುವ ವೇಳೆ ನೋವಿನ ಅನುಭವವಾಗಬಾರದೆಂದು ಪ್ರಜ್ಞೆ ತಪ್ಪಿಸುವುದಾಗಿ ವೈದ್ಯ ಹೇಳಿದ್ದಾನೆ. ಆದರೆ ಹಲ್ಲು ಕಿತ್ತ ಬಳಿಕ ವೈದ್ಯ ಆಕೆಯ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ.
ಈ ಸಂಬಂಧ ಮಹಿಳೆ ತಡವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಸಂತ್ರಸ್ತೆಯ ಪತಿಗೆ ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.