ಬೆಂಗಳೂರು: ಸಿಂದಗಿಯಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ. ಕಾಂಗ್ರೆಸ್ ಪಕ್ಷ ಕಳೆದ ಬಾರಿ 3ನೇ ಸ್ಥಾನದಲ್ಲಿತ್ತು, ಈ ಬಾರಿ ಎರಡನೇ ಸ್ಥಾನದಲ್ಲಿದೆ. 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಬಂದಿದ್ದು ಸಮಾಧಾನ, ಆದರೆ ಸೋಲು ಸೋಲೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜನರಿಗೆ ಬೇಸರವಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಜನರು ಬೇಸತ್ತಿದ್ದಾರೆ. ಬಿಜೆಪಿಯಿಂದ ಅಧಿಕಾರ ದುರುಪಯೋಗವಾಗಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಉಪಚುನಾವಣೆ ಫಲಿತಾಂಶದಿಂದ ಈ ವಿಚಾರ ಸ್ಪಷ್ಟವಾಗಿದೆ ಎಂದರು.
BIG NEWS: ಬೈ ಎಲೆಕ್ಷನ್ ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ; ಉಪಚುನಾವಣೆಗೆ ಒತ್ತುಕೊಡಲ್ಲ ಎಂದ ಮಾಜಿ ಸಿಎಂ HDK
ಹಾನಗಲ್ ನಲ್ಲಿ ಕಾಂಗ್ರೆಸ್ ಗೆ ಗೆಲುವಾಗಿದೆ. ಸಿಂದಗಿಯಲ್ಲಿ ಹೆಚ್ಚಿನ ಮತಗಳನ್ನು ಪಡೆದಿದ್ದೇವೆ. ಉಪಚುನಾವಣೆ ಯಾವ ಚುನಾವಣೆಗೂ ದಿಕ್ಸೂಚಿ ಅಲ್ಲ. ಆದರೆ ಇದು ಎಚ್ಚರಿಕೆ ಗಂಟೆ ಎಂಬುದು ಸತ್ಯ ಎಂದು ತಿಳಿಸಿದರು.
ಜೆಡಿಎಸ್ ಉಪಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳಲಿದೆ ಎಂದು ನಾನು ಈ ಮೊದಲೇ ಹೇಳಿದ್ದೆ. ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ ಮಾತ್ರಕ್ಕೆ ಜನ ಕೋಮುವಾದಿ ಪಕ್ಷಕ್ಕೆ ವೋಟ್ ಹಾಕುವುದಿಲ್ಲ. ಜೆಡಿಎಸ್ ಸ್ಪರ್ಧೆಯಲ್ಲಿಯೇ ಇರಲಿಲ್ಲ. 2023ರಲ್ಲಿಯೂ ಸ್ಪರ್ಧೆಗೆ ಇರುವುದಿಲ್ಲ. 2023ರ ಚುನಾವನೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಇದರಲ್ಲಿ ಯಾವುದೇ ಸಂಶಯಗಳು ಜನರಿಗೆ ಬೇಡ ಎಂದು ಹೇಳಿದರು.