ಗುಜರಾತ್ ನ ಅಹಮದಾಬಾದ್ ನಲ್ಲಿ ತಲೆತಗ್ಗಿಸುವ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ನಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾರೆ. ಅಪಾರ್ಟ್ಮೆಂಟ್ ನ ಮೊದಲ ಮಹಡಿಯಲ್ಲಿ ಮಗು ಅಳ್ತಿತ್ತು. ಮಗು ಅಳುವ ಶಬ್ಧ ಕೇಳಿ ಬಂದ ಜನರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೊದಲ ಮಹಡಿಯಲ್ಲಿರುವ ಗಣಪತಿ ಮೂರ್ತಿ ಮುಂದೆ ಮಗುವನ್ನು ಇಟ್ಟು ಹೋಗಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಹುಟ್ಟಿ 1 ದಿನವಾಗಿರಬಹುದು ಎನ್ನಲಾಗ್ತಿದೆ.
ಅಹಮದಾಬಾದ್ ನಲ್ಲಿ 15 ದಿನಗಳಲ್ಲಿ ಇಂಥ ಘಟನೆ ಎರಡನೇ ಬಾರಿ ನಡೆದಿದೆ. ಮಗುವಿಗೆ ಚಿಕಿತ್ಸೆ ನಡೆಯುತ್ತಿದೆ. ಮಗು ಚೇತರಿಸಿಕೊಳ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
15 ದಿನಗಳ ಹಿಂದೆ ನಡೆದ ಘಟನೆಯಲ್ಲಿ ಮಗುವಿನ ತಾಯಿ ಸಿಕ್ಕಿಬಿದ್ದಿದ್ದಳು. ಮದುವೆಯಾಗದೆ ಮಗುವಾದ ಕಾರಣ, ಮಗುವನ್ನು ಬಿಟ್ಟು ಹೋಗಿದ್ದೆ ಎಂದು ತಾಯಿ ಹೇಳಿದ್ದಳು. ಗಾಂಧಿನಗರದಲ್ಲಿ ಅಕ್ಟೋಬರ್ 8ರಂದು ಘಟನೆ ನಡೆದಿತ್ತು.