ನಟ ಪುನೀತ್ ರಾಜ್ಕುಮಾರ್ ಉತ್ತರ ಕನ್ನಡ ಜಿಲ್ಲೆಗೆ ಅನೇಕ ಬಾರಿ ಆಗಮಿಸಿದ್ದರು. ಪ್ರಸಿದ್ಧ ನಟನಾಗಿದ್ದರೂ ಸಹ ಸರಳತೆಯ ಸಾಕಾರ ಮೂರ್ತಿಯಾಗಿದ್ದ ನಟಸಾರ್ವಭೌಮ ಪುನೀತ್ ಜೋಯಿಡಾದ ಬುಡಕಟ್ಟು ಜನಾಂಗವಾದ ಕುಣುಬಿ ಹಾಗೂ ಗೌಳಿಗರ ಜೊತೆ ಕೂತು ಕುಶಲೋಪರಿ ವಿಚಾರಿಸಿದ್ದರು.
ಸಿನಿಮಾ ಚಿತ್ರೀಕರಣಕ್ಕೆಂದು ಜೋಯಿಡಾಗೆ ಆಗಮಿಸಿದ್ದ ಪವರ್ ಸ್ಟಾರ್ ಪುನೀತ್ ಕಾಡುಮನೆ ಜೇನುತುಪ್ಪ ಸವಿದಿದ್ದರು. ಗೌಳಿ ಹಾಗೂ ಕುಣುಬಿಯರ ಮನೆಯಲ್ಲೇ ಕೂತು ಊಟದ ಆತಿಥ್ಯವನ್ನೂ ಸ್ವೀಕರಿಸಿದ್ದರು. ಹತ್ತು ದಿನಗಳ ಕಾಲ ಜೋಯಿಡಾದಲ್ಲೇ ಇದ್ದ ಪುನೀತ್ ಹಾರ್ನ್ಬಿಲ್ ಪಕ್ಷಿಯನ್ನು ಮೊದಲಬಾರಿಗೆ ಕಣ್ತುಂಬಿಕೊಂಡು ಸಂಭ್ರಮಿಸಿದ್ದರು.
ಚಂದನವನ ಕಂಡ ಅಪ್ರತಿಮ ನಟ ಪುನೀತ್ ರಾಜ್ಕುಮಾರ್ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ. ದೈಹಿಕ ಕಸರತ್ತು ನಡೆಸುತ್ತಿದ್ದ ವೇಳೆ ಹೃದಾಯಾಘಾತ ಉಂಟಾಗಿದ್ದು ಕೂಡಲೇ ಪುನೀತ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ. ನಟ ಪುನೀತ್ ರಾಜ್ಕುಮಾರ್ ಪಾರ್ಥೀವ ಶರೀರವನ್ನು ಸದಾಶಿವನಗರದ ನಿವಾಸದಲ್ಲಿ ಇರಿಸಲಾಗಿದ್ದು ಗಣ್ಯ ವ್ಯಕ್ತಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸಾರ್ವಜನಿಕರಿಗೆ ನೆಚ್ಚಿನ ನಟನ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಅವಕಾಶ ಕಲ್ಪಿಸಲಾಗಿದೆ.