ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಕಂದಾಯ ಸಚಿವ ಆರ್.ಅಶೋಕ್, ಸಿದ್ದರಾಮಯ್ಯ ಸಾಧನೆಯೇನು ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಸಿಎಂ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ಇನ್ನೂ ಮೂರು ತಿಂಗಳು ಕಳೆದಿಲ್ಲ ಆಗಲೇ ಸಿದ್ದರಾಮಯ್ಯ ಪದೇ ಪದೇ ಬೊಮ್ಮಾಯಿಯವರು ಏನು ಅಭಿವೃದ್ಧಿ ಮಾಡಿದ್ದಾರೆ? ಎಂದು ಕೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಮಾಡಿದ ಅಭಿವೃದ್ಧಿಯೇನು? 125 ಶಾಸಕರಿದ್ದ ಕಾಂಗ್ರೆಸ್ ಪಕ್ಷವನ್ನು 75ಕ್ಕೆ ತಂದು ನಿಲ್ಲಿಸಿದರು. ಗೆದ್ದಿದ್ದ ಶಾಸಕರಲ್ಲಿ 12 ಜನರು ಪಕ್ಷವನ್ನೇ ಬಿಟ್ಟು ಹೋದರು ಇದು ಸಿದ್ದರಾಮಯ್ಯನವರ ಸಾಧನೆ ಎಂದು ತಿರುಗೇಟು ನೀಡಿದರು.
ಹೊಸ ಗೆಳೆಯನನ್ನು ಹುಡುಕಿಕೊಂಡ ಹೃತಿಕ್ ರೋಷನ್ ಮಾಜಿ ಪತ್ನಿ
ಸಿದ್ದರಾಮಯ್ಯನವರ ದುರಾಡಳಿತ, ದಾದಾಗಿರಿಯಿಂದಾಗಿ 55 ಶಾಸಕರು ಸೋಲನುಭವಿಸಿದರು. ಹಲವರು ಪಕ್ಷ ತೊರೆದು ಹೋದರು. ಕಾಂಗ್ರೆಸ್ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ದೆಹಲಿಯಲ್ಲಿ ಮನೆ ಬಿರುಕು ಬಿಟ್ಟಿದೆ. ರಾಜ್ಯದಲ್ಲಿ ಪಕ್ಷವೇ ಒಡೆದು ಹೋಗುತ್ತಿದೆ. ಅತ್ತ ಪಂಜಾಬ್ ನಲ್ಲಿ ಸಿಧು, ಕರ್ನಾಟಕದಲ್ಲಿ ಸಿದ್ದು- ಇಬ್ಬರೂ ಸೇರಿ ಕಾಂಗ್ರೆಸ್ ತಿಥಿ ಮಾಡಿಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಬಿಜೆಪಿಯ ಬಿ ಟೀಮ್ ಎನ್ನುವ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡಿದೆ. ಹಿಂದುತ್ವ ವಿಚಾರದಲ್ಲಿ ಬಿಜೆಪಿಗಿಂತ ಶಿವಸೇನೆ ಕಠೋರ. ಆದರೂ ಅಲ್ಲಿ ಹೇಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.