ಕೇರಳದ ಕಣ್ಣೂರಿನಲ್ಲಿ ಕಲಾವಿದರೊಬ್ಬರು ಖಾದ್ಯ ವಸ್ತುಗಳೊಂದಿಗೆ 24 ಅಡಿಗಳ ತೆಯ್ಯಂ ಮ್ಯಾಸ್ಕಾಟ್ ಅನ್ನು ರಚಿಸಿದ್ದಾರೆ.
ಸುರೇಶ್ ಪಿ.ಕೆ., ಡಾ ವಿಂಚಿ ಸುರೇಶ್ ಎಂದು ಕೂಡ ಕರೆಯಲ್ಪಡುವ ಈ ಕಲಾವಿದರು, ಬಿಸ್ಕತ್ತುಗಳು ಮತ್ತು ಇತರ ಸಿಹಿ ಬೇಕರಿ ವಸ್ತುಗಳನ್ನು ಬಳಸಿ ಮ್ಯಾಸ್ಕಾಟ್ಗೆ ಆಕಾರ ನೀಡಿದ್ದಾರೆ.
ತಾವು ರಚಿಸಿದ ಈ ಕಲಾಕೃತಿಯನ್ನು ಇನ್ಸ್ಟಾಗ್ರಾಂನಲ್ಲಿ ಸುರೇಶ್ ಪಿ.ಕೆ. ಹಂಚಿಕೊಂಡಿದ್ದಾರೆ. ಈ ವಿಶಿಷ್ಟ ಕಲಾಕೃತಿಯನ್ನು ರಚಿಸಿದ್ದಕ್ಕಾಗಿ ಅವರು ಕಲಾ ಅಭಿಜ್ಞರಿಂದ ಉತ್ತಮ ಮೆಚ್ಚುಗೆಯನ್ನು ಪಡೆದಿದ್ದಾರೆ. ಚಿತ್ರದಲ್ಲಿ ವರ್ಣಮಯವಾದ ತೆಯ್ಯಂ ಮ್ಯಾಸ್ಕಾಟ್ ಅನ್ನು ನೋಡಬಹುದು. ಇದು ಕೇರಳದ ಪ್ರಬಲವಾದ ಧಾರ್ಮಿಕ ನೃತ್ಯವನ್ನು ನಮಗೆ ನೆನಪಿಸುತ್ತದೆ.
ಕಣ್ಣೂರಿನ ಬೇಕ್ ಸ್ಟೋರಿ ಲೈವ್ ಬೇಕರಿಯ ಬಾಣಸಿಗ ರಶೀದ್ ಮೊಹಮ್ಮದ್ ಸೂಚನೆ ಮೇರೆಗೆ ಕಣ್ಣೂರಿಗೆ ಆಗಮಿಸಿದ ಡಾ ವಿಂಚಿ ಸುರೇಶ್, 15 ಗಂಟೆಗಳಲ್ಲಿ ಮ್ಯಾಸ್ಕಾಟ್ ಅನ್ನು ಪೂರ್ಣಗೊಳಿಸಿದ್ದಾರೆ. “ಇದು 25,000 ಬಿಸ್ಕತ್ತುಗಳು ಮತ್ತು ಇತರ ಬೇಕರಿ ಉತ್ಪನ್ನಗಳಿಂದ ವಿವಿಧ ಬಣ್ಣಗಳು ಮತ್ತು ಗಾತ್ರಗಳಿಂದ ಮಾಡಲ್ಪಟ್ಟಿದೆ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಡಾ ವಿಂಚಿ ಸುರೇಶ್ ಕೇರಳದ ಪ್ರಸಿದ್ಧ ಕಲಾವಿದ. ಇವರು 24-ಅಡಿ ತೆಯ್ಯಂ ಮ್ಯಾಸ್ಕಾಟ್ ರಚಿಸಲು 25,000 ಬಿಸ್ಕತ್ತುಗಳನ್ನು ಬಳಸಿದ್ದಾರೆ. ಈ ಮೊದಲು, ಅವರು ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನು ಚಿನ್ನದಲ್ಲಿ ಮತ್ತು ಸಮಾಜ ಸುಧಾರಕರಾದ ಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಹೂವಿನಲ್ಲಿ ಮಾಡಿದ್ದರು. ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಭಾವಚಿತ್ರವನ್ನು ಬಟ್ಟೆಯ ಮುಖವಾಡಗಳನ್ನು ಬಳಸಿ ರಚಿಸಿದ್ದರು.
ಕಲಿಯತ್ತಂ ಎಂದೂ ಕರೆಯಲ್ಪಡುವ ತೆಯ್ಯಂ ಒಂದು ಧಾರ್ಮಿಕ ನೃತ್ಯವಾಗಿದ್ದು, ಇದು ಉತ್ತರ ಕೇರಳದಲ್ಲಿ ಬಹಳ ಜನಪ್ರಿಯವಾಗಿದೆ. ನೃತ್ಯ ಮತ್ತು ಸಂಗೀತದ ಅಪರೂಪ ಸಂಯೋಜನೆಯಾಗಿರುವ ಇದು ಇಲ್ಲಿನ ಬುಡಕಟ್ಟು ಜನರ ಪ್ರಮುಖ ವೈಶಿಷ್ಟ್ಯತೆಗಳನ್ನು ಪ್ರತಿಫಲಿಸುತ್ತದೆ. ತೆಯ್ಯಂ ಹಲವಾರು ಸಾವಿರ ವರ್ಷಗಳ ಹಿಂದಿನ ಸಂಪ್ರದಾಯಗಳು, ಆಚರಣೆಗಳು ಮತ್ತು ಪದ್ಧತಿಗಳನ್ನು ಒಳಗೊಂಡಿದೆ. ಇದರ ಪ್ರದರ್ಶಕರು ಭಾರಿ ಮೇಕಪ್, ಆಕರ್ಷಕ ವೇಷಭೂಷಣಗಳು, ಭವ್ಯವಾದ ಶಿರಸ್ತ್ರಾಣಗಳು ಮತ್ತು ಆಭರಣಗಳನ್ನು ಧರಿಸುತ್ತಾರೆ.
https://www.instagram.com/p/CUuYC9UNdRn/?utm_source=ig_embed&ig_rid=32f8623e-0af3-4fc0-aefd-729796e8cf1f