KSRTC ಬಸ್ ಹರಿದ ಪರಿಣಾಮ ತಾಯಿ ಹಾಗೂ ಪುಟ್ಟ ಕಂದಮ್ಮ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿ ಸಂಭವಿಸಿದೆ. ಚಾಲಕನ ಅತಿ ವೇಗದ ಚಾಲನೆಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಮೃತ ಮಹಿಳೆಯನ್ನು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿ ಸಿದ್ದೀಕ್ ಎಂಬವರ ಪತ್ನಿ 25 ವರ್ಷದ ಶಾಹಿದಾ ಎಂದು ಗುರುತಿಸಲಾಗಿದೆ. ಈ ಮಹಿಳೆಯ ಪುತ್ರ 1 ವರ್ಷದ ಶಾಹೀಲ್ ಕೂಡ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ. ಗೇರುಕಟ್ಟೆಯಲ್ಲಿರುವ ತವರು ಮನೆಗೆ ಬಂದಿದ್ದ ಶಾಹಿದಾ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಸ್ ನಿಲ್ದಾಣದ ಪ್ರವೇಶ ದ್ವಾರದ ಸಮೀಪದಲ್ಲೇ ಬಸ್ ಡಿಕ್ಕಿ ಹೊಡೆದಿದೆ. ಚಾಲಕನ ಸೀಟಿನ ಕೆಳಗಿರುವ ಚಕ್ರದಡಿಗೆ ತಾಯಿ – ಮಗು ಸಿಲುಕಿದ್ದಾರೆ ಎನ್ನಲಾಗಿದೆ.
ರಿಲಾಯನ್ಸ್ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಿ, ಪಡೆಯಿರಿ ಉಚಿತ ಡೇಟಾ
ತಾಯಿ – ಮಗು ಅಪಘಾತಕ್ಕೀಡಾಗುತ್ತಿದ್ದಂತೆಯೇ ಬಸ್ ನಿಲ್ಲಿಸುವಂತೆ ಸಾರ್ವಜನಿಕರು ಚಾಲಕನಿಗೆ ಹೇಳಿದ್ದಾರೆ. ಆದರೆ ಇದ್ಯಾವುದರ ಪರಿವೆ ಇಲ್ಲದಂತೆ ಇದ್ದ ಚಾಲಕ ಬಸ್ ಚಲಾಯಿಸುವುದರಲ್ಲೇ ಮಗ್ನನಾಗಿದ್ದು ಪರಿಣಾಮ ಹಿಂಬದಿಯ ಚಕ್ರವೂ ತಾಯಿ ಮಗುವಿನ ಮೇಲೆ ಹರಿದಿದೆ. ಮಗು ಹಾಗೂ ಮಹಿಳೆಯ ತಲೆಯ ಮೇಲೆಯೇ ಬಸ್ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.