ಮಕ್ಕಳನ್ನು ಶಾಲೆಗೆ ಬಿಡಲು ಬರುವ ಪೋಷಕರು ಪೈಜಾಮಾ ಧರಿಸುವುದನ್ನು ಶಾಲೆ ನಿಷೇಧಿಸಿರುವುದು ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ವಿಚಿತ್ರ ಅನಿಸಿದ್ರೂ ಸತ್ಯ.
ಯುಕೆ, ಮಿಡಲ್ಸ್ ಬರೋದಲ್ಲಿರುವ ಶಾಲೆಯು ಪೋಷಕರು ತಮ್ಮ ಮಕ್ಕಳನ್ನು ಬಿಡುವಾಗ ಕ್ಯಾಶುಯಲ್ ಪೈಜಾಮಾ ಧರಿಸುವುದನ್ನು ನಿಷೇಧಿಸಿದೆ.
ಆಯೆರ್ಸೋಮ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚಾರ್ಲೊಟ್ ಹೇಲಾಕ್ ಅವರು ಫೇಸ್‌ಬುಕ್ ನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿದ್ದಾರೆ. ಶಾಲಾ ಗೇಟ್‌ನಲ್ಲಿ ನೈಟ್‌ವೇರ್, ಪೈಜಾಮಾ, ಚಪ್ಪಲಿ ಮತ್ತು ಡ್ರೆಸ್ಸಿಂಗ್ ಗೌನ್‌ಗಳನ್ನು ಧರಿಸುವುದು ಸೂಕ್ತವಲ್ಲ ಎಂದು ಪೋಷಕರಿಗೆ ಹೇಳಿದ್ದಾರೆ.
“ಒಂದು ಶಾಲೆಯಾಗಿ, ನಾವು ನಮ್ಮ ವಿದ್ಯಾರ್ಥಿಗಳನ್ನು ಎಲ್ಲಾ ಸಮಯದಲ್ಲೂ ಸೂಕ್ತ ಬಟ್ಟೆ ಧರಿಸುವಂತೆ ಪ್ರೋತ್ಸಾಹಿಸುತ್ತೇವೆ ಹಾಗೂ ಪೋಷಕರು ಕೂಡ ಹಾಗೆ ಮಾಡುವುದು ಬಹಳ ಮುಖ್ಯ ಎಂದು ನಾವು ಭಾವಿಸುತ್ತೇವೆ” ಎಂದು ಹೇಲಾಕ್ ಬರೆದಿದ್ದಾರೆ.
ಕೆಲವು ಪೋಷಕರು ಈ ಕ್ರಮವನ್ನು ಸ್ವಾಗತಿಸಿದರೆ, ಹಲವು ಮಂದಿ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಷಕರು ತಮಗೆ ಬೇಕಾದುದನ್ನು ಧರಿಸಬಹುದು ಮತ್ತು ಮಕ್ಕಳು ಶಾಲೆಗೆ ಹೋಗುವುದು ಮಾತ್ರ ಮುಖ್ಯ ಎಂದೆಲ್ಲಾ ವಾದಿಸಿದ್ದಾರೆ.