‘ಮಾಜಿ ಸೇನಾಧಿಕಾರಿ, ಪಂಜಾಬ್ನ ಮಾಜಿ ಮುಖ್ಯಮಂತ್ರಿ, ರಾಜ್ಯಕ್ಕೆ ಸೇವೆ ಮುಂದುವರಿಯುತ್ತಿದೆ’ – ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾಹಿತಿ ನೀಡಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮ ಟ್ವಿಟರ್ನ ಬಯೋವನ್ನು ಈ ರೀತಿಯಾಗಿ ಬದಲಿಸಿಕೊಂಡಿದ್ದಾರೆ. ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಬಳಿಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಂದಿನ ನಡೆ ಏನು ಎಂಬ ಕುತೂಹಲ ಈಗಾಗಲೇ ಮನೆ ಮಾಡಿದೆ.
ಕಾಂಗ್ರೆಸ್ ತೊರೆದ ಅಮರೀಂದರ್ ಸಿಂಗ್ ಬಿಜೆಪಿಗೆ ಹೋಗ್ತಾರಾ ಎಂಬ ವದಂತಿಗಳಿಗೆ ಈಗಾಗಲೇ ತೆರೆ ಎಳೆದಿರುವ ಕ್ಯಾಪ್ಟನ್ ಬಿಜೆಪಿ ಸೇರ್ಪಡೆಯ ಮಾತನ್ನು ಅಲ್ಲಗಳೆದಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲೇ ಕಾಂಗ್ರೆಸ್ನಿಂದ ಹೊರಬರುವ ಸೂಚನೆ ನೀಡಿದ್ದ ಅಮರೀಂದರ್ ಸಿಂಗ್, ನಾನು ಕಾಂಗ್ರೆಸ್ಗೆ ರಾಜೀನಾಮೆ ನೀಡಿಲ್ಲ. ಆದರೆ ಖಂಡಿತವಾಗಿಯೂ ರಾಜೀನಾಮೆ ನೀಡುತ್ತೇನೆ, ಕಾಂಗ್ರೆಸ್ನವರು ನನ್ನನ್ನು ಇದೇ ರೀತಿ ನಡೆಸಿಕೊಂಡಲ್ಲಿ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ಇದೀಗ ಟ್ವಿಟರ್ನಲ್ಲಿ ಕಾಂಗ್ರೆಸ್ ಎನ್ನುವ ಪದವು ಮಾಯವಾಗಿದೆ.
ಇಂದು ಅಮರೀಂದರ್ ಸಿಂಗ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾರನ್ನು ಭೇಟಿಯಾದ ಬಳಿಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಗುಮಾನಿ ಎದ್ದಿತ್ತು. ಆದರೆ ಈ ವದಂತಿಗೂ ಕ್ಯಾಪ್ಟನ್ ತೆರೆ ಎಳೆದಿದ್ದಾರೆ.