ದುಬೈ: ಮುಂಬೈ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಜಯ ಗಳಿಸಿದೆ. ಈ ಪಂದ್ಯದಲ್ಲಿ 13 ರನ್ ಗಳಿಸಿದಾಗ ಟಿ20 ಮಾದರಿಯಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಹಾಗೂ ವಿಶ್ವದ 5ನೇ ಆಟಗಾರ ಎಂಬ ಕೀರ್ತಿಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿದ ಅವರು 314 ಟಿ20 ಪಂದ್ಯಗಳ 298 ಇನಿಂಗ್ಸ್ ಗಳಲ್ಲಿ 10,038 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ, 74 ಅರ್ಧಶತಕ ದಾಖಲಾಗಿವೆ.
ವಿರಾಟ್ ಕೊಹ್ಲಿ ಟಿ20 ಯಲ್ಲಿ 10,000 ರನ್ ಗಳಿಸಿದ ವಿಶ್ವದ 5ನೇ ಬ್ಯಾಟ್ಸ್ ಮನ್ ಆಗಿದ್ದಾರೆ. ಕ್ರಿಸ್ ಗೇಲ್(14,275 ರನ್) ಕಿರನ್ ಪೊಲಾರ್ಡ್(11,195 ರನ್), ಶೋಯಬ್ ಮಲಿಕ್ (10,808 ರನ್), ಡೇವಿಡ್ ವಾರ್ನರ್(10,019 ರನ್) ಗಳಿಸಿದ್ದಾರೆ.
ಕೊಹ್ಲಿ ಅಂತರರಾಷ್ಟ್ರೀಯ, ದೇಶೀಯ ಹಾಗೂ ಫ್ರಾಂಚೈಸಿ ವಿಭಾಗಗಳಲ್ಲಿ 10 ಸಾವಿರ ರನ್ ಕಲೆಹಾಕಿರುವುದು ವಿಶೇಷವಾಗಿದೆ. ಅಂತರರಾಷ್ಟ್ರೀಯ ಟಿ20 ಯಲ್ಲಿ 90 ಪಂದ್ಯಗಳನ್ನಾಡಿರುವ ಅವರು 28 ಅರ್ಧಶತಕಗಳೊಂದಿಗೆ 3159 ರನ್ ಕಲೆಹಾಕಿದ್ದಾರೆ. 202 ಐಪಿಎಲ್ ಪಂದ್ಯಗಳಲ್ಲಿ 5 ಶತಕ, 42 ಅರ್ಧಶತಕ ಸಹಿತ 6185 ರನ್ ಕಲೆಹಾಕಿದ್ದಾರೆ.