ಯುವಕ ಕಿಡ್ನಾಪ್ ಆದ 12 ಗಂಟೆಗಳಲ್ಲಿ ಆತನನ್ನು ರಕ್ಷಿಸಿದ್ದು ಮಾತ್ರವಲ್ಲದೇ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ವಿಚಾರಣೆ ವೇಳೆ ಯುವಕನ ಸ್ನೇಹಿತರೇ ಆತನನ್ನು ಕಿಡ್ನಾಪ್ ಮಾಡಿದ್ದರು ಎಂದು ತಿಳಿದುಬಂದಿದೆ.
ಮಧ್ಯ ಪ್ರದೇಶ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ರೇವಾ ನಿವಾಸಿಯಾದ ಶಿವಂ ಕೌಲ್ ಎಂಬಾತನನ್ನು ಬುಧವಾರ ಸಂಜೆ ಅಪಹರಣ ಮಾಡಲಾಗಿತ್ತು.
ಕೌಲ್ನನ್ನು ಅಪಹರಣ ಮಾಡಿದವರು ಆತನ ತಾಯಿಗೆ ಕರೆ ಮಾಡಿ 8 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹಣದ ಸಮೇತ ಡೊಡೋನ್ ಕಾಡಿಗೆ ಬರುವಂತೆ ತಾಯಿಗೆ ಬೆದರಿಕೆಯೊಡ್ಡಿದ್ದರು ಎಂದು ರೇವಾ ಸೂಪರಿಟೆಂಡೆಂಟ್ ನವನೀತ್ ಭಾಸಿನ್ ಹೇಳಿದ್ದಾರೆ.
ಕೌಲ್ ಅಪಹರಣಕಾರರು ಕರೆ ಮಾಡುತ್ತಿದ್ದಂತೆ ತಾಯಿ ತನ್ನ ಪತಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕೌಲ್ ತಂದೆ ಜಾವಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ಮಾತ್ರವಲ್ಲದೇ ಕಿಡ್ನಾಪರ್ಗಳು ಕರೆ ಮಾಡಿದ್ದ ಮೊಬೈಲ್ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದರು.
ಅಪಹರಣಕಾರರು ಕರೆ ಮಾಡಿದ್ದ ಮೊಬೈಲ್ ಸಂಖ್ಯೆಯನ್ನು ಸೈಬರ್ ಸೆಲ್ ಹಾಗೂ ಟೆಕ್ನಿಕಲ್ ಟೀಂಗೆ ಪೊಲೀಸರು ನೀಡಿದರು. ಟೆಕ್ನಿಕಲ್ ಟೀಂ ಈ ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಕೂಡಲೇ ಸ್ಥಳಕ್ಕೆ ತೆರಳಿದ್ದ ಪೊಲೀಸರು ಕೌಲ್ನನ್ನು ರಕ್ಷಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಮೂವರು ಆರೋಪಿಗಳು ಅಪ್ರಾಪ್ತರು ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಅಪ್ರಾಪ್ತರು ಹಣ ಸಿಗುತ್ತೆ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಅಪಹರಣ ಮಾಡಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದಾರೆ.