ಬೆಂಗಳೂರು: ಇಂದು ವಿಧಾನಮಂಡಲ ಅಧಿವೇಶನದ ಕೊನೇ ದಿನವಾಗಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಂಟಿ ಅಧಿವೇಶನ ಕರೆಯಲಾಗಿದೆ. ಆದರೆ ಜಂಟಿ ಅಧಿವೇಶನ ಉದ್ದೇಶಿಸಿಸಿ ಲೋಕಸಭಾ ಸ್ಪೀಕರ್ ಮಾತನಾಡಲು ಮುಂದಾಗಿರುವುದು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ.
ಇಂದು ಅಧಿವೇಶನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಗಿಯಾಗುತ್ತಿದ್ದು, ಜಂಟಿ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 2:30ಕ್ಕೆ ಅಧಿವೇಶನ ಆರಂಭವಾಗುತ್ತಿದ್ದು, ಎಲ್ಲಾ ಸದಸ್ಯರಿಗೂ ಹಾಜರಿರುವಂತೆ ಸ್ಪೀಕರ್ ಕಾಗೇರಿ ಸೂಚಿಸಿದ್ದಾರೆ. ಆದರೆ ಬಿಎಸಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿಲ್ಲ, ಇಂತಹ ತಪ್ಪು ಸಂಪ್ರದಾಯಕ್ಕೆ ಬಿಜೆಪಿ ನಾಂದಿ ಹಾಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.
ನಿಮ್ಮ ಕಣ್ಣುಗಳನ್ನೇ ನಂಬದಂತೆ ಮಾಡುತ್ತೆ ಈ ವಿಡಿಯೋ…!
ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಂದಿನ ಜಂಟಿ ಅಧಿವೇಶನವನ್ನು ಕಾಂಗ್ರೆಸ್ ಬಹಿಷ್ಕರಿಸುತ್ತೆ. ಓಂ ಬಿರ್ಲಾ ತಮ್ಮ ಭಾಷಣವನ್ನು ಲೋಕಸಭೆಯಲ್ಲಿ ಇಟ್ಟುಕೊಳ್ಳಲಿ. ಆದರೆ ರಾಜ್ಯ ವಿಧಾನಸಭೆಯಲ್ಲಿ ಜಂಟಿ ಅಧಿವೇಶ ಉದ್ದೇಶಿಸಿ ಅವರು ಭಾಷಣ ಮಾಡುವುದು ಸರಿಯಲ್ಲ. ಪಾರ್ಲಿಮೆಂಟ್ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಬ್ಯಾಂಕ್ವೇಟ್ ಹಾಲ್ ಇದ್ದರೂ ವಿಧಾನಸಭೆ ಬಳಸಿಕೊಂಡು ಬಿಜೆಪಿಯಿಂದ ಕೆಟ್ಟ ಪದ್ಧತಿಗೆ ನಾಂದಿ ಹಾಡಲಾಗುತ್ತಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಲು ಹೊರಟಿದ್ದಾರೆ ಇದನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಕಾಂಗ್ರೆಸ್ ಸದಸ್ಯರು ಜಂಟಿ ಅಧಿವೇಶನದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದರು.