ತಾಲಿಬಾನ್ ಇಂದು ಉಪ ಸಚಿವರ ಪಟ್ಟಿಯನ್ನು ಘೋಷಣೆ ಮಾಡಿದೆ. ನಿರೀಕ್ಷೆಯಂತೆ ಈ ಪಟ್ಟಿಯಲ್ಲೂ ಸಹ ಯಾವುದೇ ಮಹಿಳೆಯರಿಗೆ ಸ್ಥಾನ ನೀಡಲಾಗಿಲ್ಲ. ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೊಸ ಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಹಜಾರಗಳಂತಹ ಜನಾಂಗೀಯ ಅಲ್ಪಸಂಖ್ಯಾತರಿಗೆ ಸ್ಥಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೂ ಸ್ಥಾನ ನೀಡಬಹುದು ಎಂದು ಹೇಳಿದ್ರು.
ಸೆಪ್ಟೆಂಬರ್ 7ರಂದು ತಾಲಿಬಾನ್ ಅಫ್ಘಾನಿಸ್ತಾನದ ಆಡಳಿತ ನಡೆಸಲು ಸಂಪುಟ ರಚನೆ ಮಾಡಿತ್ತು. ಎರಡು ದಶಕಗಳ ಬಳಿಕ ಅಪ್ಘಾನಿಸ್ತಾನದಲ್ಲಿ ಪಾರುಪತ್ಯ ಸಾಧಿಸಿದ್ದ ತಾಲಿಬಾನ್ ಸರ್ಕಾರಕ್ಕೆ ಎಫ್ಬಿಐನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ನೇತೃತ್ವ ವಹಿಸಿದ್ದರು. ಹಕ್ಕಾನಿ ನೆಟ್ವರ್ಕ್ನ ಬಹುತೇಕ ನಾಯಕರನ್ನು ಸಂಪುಟದಲ್ಲಿ ಇರಿಸಲಾಗಿದೆ. ಹಕ್ಕಾನಿ ನೆಟ್ ವರ್ಕ್ ಸ್ಥಾಪಕರ ಪುತ್ರ ಸಿರಾಜುದ್ದೀನ್ ಹಕ್ಕಾನಿ ಅಫ್ಘಾನಿಸ್ತಾನದ ಆಂತರಿಕ ಸಚಿವನಾಗಿದ್ದಾನೆ.
ಆತ್ಮಾಹುತಿ ದಾಳಿ ಹಾಗೂ ಅಲ್ಖೈದಾ ಜೊತೆಗಿನ ಸಂಬಂಧದ ಹಿನ್ನೆಲೆ ಸಿರಾಜುದ್ದೀನ್ ಕೂಡ ಎಫ್ಬಿಐ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳಲ್ಲಿ ಒಬ್ಬನಾಗಿದ್ದಾನೆ.