ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕಿನಿಂದ ಸಾಗಿದೆ. 2 ಕೋಟಿಗೂ ಹೆಚ್ಚು ಮಂದಿಗೆ ಒಂದೇ ದಿನ ಕೊರೊನಾ ಲಸಿಕೆ ಹಾಕಿ, ದಾಖಲೆ ಬರೆಯಲಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡು ವಿದೇಶ ಸುತ್ತುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಕೊರೊನಾ ಲಸಿಕೆ ನಂತ್ರವೂ ಯುಕೆಯಲ್ಲಿ ಭಾರತೀಯರಿಗೆ ಪ್ರವೇಶವಿಲ್ಲ.
ಹೌದು, ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್ ಹೊಸ ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡಿವೆ. ಇದ್ರಲ್ಲಿ ಭಾರತದಲ್ಲಿ ನೀಡಲಾಗ್ತಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡನ್ನೂ ಮಾನ್ಯ ಮಾಡಲಾಗಿಲ್ಲ. ಅಕ್ಟೋಬರ್ 4ರಿಂದ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ.
ಆಘಾತಕಾರಿ ವಿಷ್ಯವೆಂದ್ರೆ ಸೀರಮ್ ಇನ್ಸ್ಟಿಟ್ಯೂಟ್, ಕೋವಿಶೀಲ್ಡ್ ತಯಾರಿಸಿದೆ. ಇದೇ ಲಸಿಕೆಯನ್ನು ಅಸ್ಟ್ರಾಜೆನಿಕಾ-ಆಕ್ಸ್ಫರ್ಡ್ ಲಸಿಕೆ ಹೆಸರಿನಲ್ಲಿ ಬ್ರಿಟನ್‌ನಲ್ಲಿ ನೀಡಲಾಗ್ತಿದೆ. ಇಷ್ಟಾದ್ರೂ ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ಸಿಕ್ಕಿಲ್ಲ. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಪಡೆದವರನ್ನು ಕೂಡ, ಲಸಿಕೆ ಪಡೆಯದವರ ಸಾಲಿಗೆ ಸೇರಿಸಲಾಗುತ್ತದೆ. ಲಸಿಕೆ ಪಡೆಯದ ಜನರು ಅನುಸರಿಸಬೇಕಾದ ನಿಯಮಗಳನ್ನು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಪಡೆದವರು ಪಾಲಿಸಬೇಕಾಗುತ್ತದೆ. ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನೂ ಹಾಕಲಾಗ್ತಿದೆ. ಆದ್ರೆ ಇದಕ್ಕೆ ಕೂಡ ಮಾನ್ಯತೆ ಸಿಕ್ಕಿಲ್ಲ.
ಬ್ರಿಟನ್ ಈಗಾಗಲೇ ಈ ನಿಯಮ ಅನುಸರಿಸುತ್ತಿದೆ. ಹೊಸ ಮಾರ್ಗಸೂಚಿಯಲ್ಲಿ, ಭಾರತಕ್ಕೆ ರಿಯಾಯಿತಿ ಸಿಗಬಹುದೆಂದು ಭಾವಿಸಲಾಗಿತ್ತು. ಆದ್ರೆ ಯಾವುದೇ ರಿಯಾಯಿತಿ ನೀಡಲಾಗಿಲ್ಲ. ಥೈಲ್ಯಾಂಡ್, ಆಫ್ರಿಕಾದಿಂದ ಬರುವ, ಕೊರೊನಾ ಲಸಿಕೆ ಪಡೆದ ಪ್ರವಾಸಿಗರು ಕೂಡ, ಯುಕೆಯಲ್ಲಿ 10 ದಿನ ಕ್ವಾರಂಟೈನ್ ಆಗ್ಬೇಕು. ಕೆಲವೊಮ್ಮೆ ಆರ್ ಟಿ ಪಿ ಸಿ ಆರ್ ಪರೀಕ್ಷೆ ಮಾಡಲಾಗುತ್ತದೆ.