ದಾವಣಗೆರೆ: ಬಿಜೆಪಿಯ ಕೆಲ ನಾಯಕರ ಅಸಮಾಧಾನ ಇನ್ನೂ ಶಮನವಾದಂತೆ ಕಾಣುತ್ತಿಲ್ಲ. ದಾವಣಗೆರೆಯಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಿಂದ ಕೆಲ ನಾಯಕರು ಅಂತರ ಕಾಯ್ದುಕೊಂಡಿರುವುದು ಕೇಸರಿ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಇನ್ನಷ್ಟು ಪುಷ್ಠಿ ನೀಡುವಂತಿದೆ.
ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶಿವನಗೌಡ ನಾಯಕ್, ಎಸ್.ಎ.ರಾಮದಾಸ್ ಸೇರಿದಂತೆ ಹಲವು ನಾಯಕರು ಬಿಜೆಪಿ ಕಾರ್ಯಕಾರಿಣಿ ಸಭೆಗೆ ಗೈರಾಗಿದ್ದಾರೆ. ಈ ಮೂಲಕ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಐವರ ಸಾವು ಪ್ರಕರಣಕ್ಕೆ ಹೊಸ ತಿರುವು: ಡೆತ್ ನೋಟ್ ನಲ್ಲಿ ಅಕ್ರಮ ಸಂಬಂಧ ಸೇರಿ ಸ್ಪೋಟಕ ರಹಸ್ಯ ಬಯಲು…?
ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣರಾಗಿರುವ ಜಾರಕಿಹೊಳಿ ಸಹೋದರರು ಸಭೆಯಿಂದ ದೂರ ಉಳಿದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದರೂ ಕೂಡ ತಮ್ಮ ವಿರುದ್ಧದ ಸಿಡಿ ಪ್ರಕರಣ ಪರಿಹರಿಸದ ಹಿನ್ನೆಲೆಯಲ್ಲಿ ಹಾಗೂ ತಮಗೆ ಸಚಿವ ಸ್ಥಾನ ನೀಡುವ ಬಗ್ಗೆ ಬೊಮ್ಮಾಯಿ ಸರ್ಕಾರ ಯಾವುದೇ ಆಸಕ್ತಿ ತೋರದ ಕಾರಣಕ್ಕೆ ರಮೇಶ್ ಜಾರಕಿಹೊಳಿ ಬಿಜೆಪಿ ನಾಯಕರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಜಾರಕಿಹೊಳಿ ಬ್ರದರ್ಸ್ ಕಾರ್ಯಕಾರಿಣಿಯಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಎಸ್.ಎ. ರಾಮದಾಸ್ ಗೂ ಮಂತ್ರಿ ಸ್ಥಾನ ಸಿಗದಿರುವುದು ಬೇಸರಕ್ಕೆ ಕಾರಣವಾಗಿದ್ದು, ಕಾರ್ಯಕಾರಿಣಿಗೆ ಗೈರಾಗಿದ್ದಾರೆ ಎನ್ನಲಾಗಿದೆ.