ಆರು ತಿಂಗಳು ಕೋಮಾದಲ್ಲಿದ್ದು, ಒಟ್ಟು ಒಂಬತ್ತು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಪೂರ್ಣ ಗುಣಮುಖ ಕಾಣದೆಯೇ ಪಾರ್ಶ್ವವಾಯು ಪೀಡಿತರಾದ ತೆಲಂಗಾಣ ಮೂಲದ ಕಾಟ್ಲಾಗಂಗಾ ರೆಡ್ಡಿಗೆ ದುಬೈ ಆಸ್ಪತ್ರೆ ಮಾನವೀಯತೆ ಆಧಾರದ ಮೇಲೆ 3.4 ಕೋಟಿ ರೂ. ಚಿಕಿತ್ಸಾ ಶುಲ್ಕವನ್ನು ಮನ್ನಾ ಮಾಡಿದೆ.
ಇದಲ್ಲದೆಯೇ, 53 ವರ್ಷದ ಗಂಗಾ ರೆಡ್ಡಿ ಅವರನ್ನು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ಏರ್‌ಲಿಫ್ಟ್ ಕೂಡ ಮಾಡುವ ಮೂಲಕ ಹೆಚ್ಚುವರಿಯಾಗಿ 4.04 ಲಕ್ಷ ರೂ. ವೆಚ್ಚ ಮಾಡಿದೆ.
ಸದ್ಯಕ್ಕೆ ಗಂಗಾ ರೆಡ್ಡಿ ಅವರು ತೆಲಂಗಾಣದ ಶಂಶಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ಪುಂಜಾಗುಟ್ಟಾದ ನಿಜಾಮ್ಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ನಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.
ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯ ಮನಮೋಹಕ ಫೋಟೋ ಕ್ಲಿಕ್ಕಿಸಿದ ಗಗನಯಾತ್ರಿ
ದುಬೈನ ಮೆಡಿಕ್ಲಿನಿಕ್ ಸಿಟಿ ಆಸ್ಪತ್ರೆಯ ಈ ವಿಶಾಲ ಹೃದಯದ ಸಹಾಯಕ್ಕೆ ದುಬೈನಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಧನ್ಯವಾದ ತಿಳಿಸಿದ್ದಾರೆ. ಗಲ್ಫ್ ವರ್ಕರ್ಸ್ ರಕ್ಷ ಣೆ ಸಮಿತಿ ಅಧ್ಯಕ್ಷ ಗುಂಡೆಲ್ಲಾ ನರಸಿಂಹ ಕೂಡ ಆಸ್ಪತ್ರೆಗೆ ಧನ್ಯವಾದ ಅರ್ಪಿಸಿದ್ದಾರೆ.
ಇದು ಎರಡನೇ ಪ್ರಕರಣವಾಗಿದ್ದು, 2020ರ ಜುಲೈನಲ್ಲಿ ಕೊರೊನಾ ಆರ್ಭಟ ಜೋರಾಗಿದ್ದಾಗ ಕೋವಿಡ್-19 ಸೋಂಕಿಗೆ ಒಳಪಟ್ಟು ಜಗತಿಯಾಲ್ ಜಿಲ್ಲೆಯ ಗೊಲ್ಲಪಲ್ಲಿ ಮಂಡಲದ ರಾಜೇಶ್ ಎಂಬ ಕಾರ್ಮಿಕ ತೀವ್ರ ಅಸ್ವಸ್ಥನಾಗಿದ್ದ. ಆತನಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಒಟ್ಟು 80 ದಿನಗಳಿಗೆ 1.52 ಕೋಟಿ ರೂ. ಆಗಿತ್ತು.
ದುಡ್ಡು ಹೊಂದಿಸಲಾಗದೆಯೇ ಪರದಾಡುತ್ತಿದ್ದ ರಾಜೇಶ್‌ಗೆ ನೆರವಾಗಿದ್ದು ಸಾಮಾಜಿಕ ಕಾರ್ಯಕರ್ತ ಅಶೋಕ್ ಕೊಟೆಚಾ ಮತ್ತು ಕಾರ್ಮಿಕರ ರಕ್ಷಣಾ ಸಂಘದ ಅಧ್ಯಕ್ಷ ನರಸಿಂಹ ಅವರು. ಅಷ್ಟೂ ಆಸ್ಪತ್ರೆ ಶುಲ್ಕವನ್ನು ಮಾಫಿ ಮಾಡಿಸಿ, ಉಚಿತವಾಗಿ ವಿಮಾನದ ಟಿಕೆಟ್ ಕೂಡ ಮಾಡಿಸಿಕೊಟ್ಟಿದ್ದರು. ಭಾರತಕ್ಕೆ ಮರಳಲು ಆತನಿಗೆ ಖರ್ಚಿಗಾಗಿ 10 ಸಾವಿರ ರೂ. ನಗದು ಕೂಡ ನೀಡಿದ್ದು ವರದಿಯಾಗಿತ್ತು.