24 ಗಂಟೆ ಅವಧಿಯಲ್ಲಿ ಅತೀ ಹೆಚ್ಚು ಕೊರೊನಾ ಲಸಿಕೆಯನ್ನು ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ತಿಂಗಳಿಗೆ 25 ಡೋಸ್ ಲಸಿಕೆ ಉತ್ಪಾದನೆ ಮಾಡಲು ಪ್ಲಾನ್ ಮಾಡಿದೆ ಎಂಬ ಮಾಹಿತಿಯು ಉನ್ನತ ಮೂಲಗಳಿಂದ ದೊರಕಿದೆ.
ಈ ತಿಂಗಳಲ್ಲಿ ಭಾರತವು 20 ಕೋಟಿ ಕೋವಿಶೀಲ್ಡ್ ಡೋಸ್ ಹಾಗೂ 3.5 ಕೋಟಿ ಕೋವ್ಯಾಕ್ಸಿನ್ ಡೋಸ್ನ್ನು ಪಡೆಯಲಿದೆ. ಪ್ರತಿ ತಿಂಗಳು 25 ಕೋಟಿ ಲಸಿಕೆಯನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷದ ಅಂತ್ಯದ ಒಳಗಾಗಿ ದೇಶದ 135 ಕೋಟಿ ಜನತೆಗೆ ಕನಿಷ್ಟ 1 ಡೋಸ್ ಲಸಿಕೆಯನ್ನಾದರೂ ಪೂರ್ಣಗೊಳಸಬೇಕೆಂಬ ಪ್ರಧಾನಿ ಮೋದಿಯವರ ಗುರಿಗೆ ಪೂರಕವಾಗಿ ಈ ಯೋಜನೆಯನ್ನು ಮಾಡಲಾಗಿದೆ ಎನ್ನಲಾಗಿದೆ.
ಅಲ್ಲದೇ ಕೊರೊನಾ ಮೂರನೇ ಅಲೆ ಕೂಡ ಸಮೀಪದಲ್ಲೇ ಇರುವುದರಿಂದ ಕೋವಿಡ್ ಲಸಿಕಾ ಅಭಿಯಾನಕ್ಕೆ ಚುರುಕು ಮುಟ್ಟಿಸುವ ಪ್ರಯತ್ನ ಕೂಡ ನಡೆಯುತ್ತಿದೆ.
ಪ್ರಧಾನಿ ಮೋದಿ 71ನೇ ಜನ್ಮದಿನದ ಪ್ರಯುಕ್ತ ಶುಕ್ರವಾರ ದೇಶದಲ್ಲಿ 2.50 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದು ವಿಶ್ವದಲ್ಲಿ ಯಾವುದೇ ರಾಷ್ಟ್ರವೂ ಮಾಡಿರದ ಸಾಧನೆಯಾಗಿದೆ.