ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಬುಧವಾರ 1500 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಮುಂಬೈನ ಕ್ರೈಂ ಬ್ರ್ಯಾಂಚ್ನ ಪ್ರಾಪರ್ಟಿ ಸೆಲ್ಗೆ ನೀಡಿದ್ದ ಹೇಳಿಕೆಯಲ್ಲಿ ನಟಿ ಶಿಲ್ಪಾ ಶೆಟ್ಟಿ, ನಾನು ನನ್ನದೇ ಆದ ಕೆಲಸದಲ್ಲಿ ಎಷ್ಟು ನಿರತಳಾಗಿದ್ದೆ ಅಂದರೆ ನನಗೆ ಪತಿ ರಾಜ್ ಕುಂದ್ರಾ ಯಾವ ವ್ಯವಹಾರ ನಡೆಸುತ್ತಿದ್ದರು ಎನ್ನುವುದೂ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳಿಂದ ನಾನು ಕಿನಾರಾ ಬಂಗಲೆಯಲ್ಲಿ ವಾಸಿಸುತ್ತಿದ್ದೇನೆ. 2007ರಲ್ಲಿ ನಾನು ಬಿಗ್ ಬ್ರದರ್ ರಿಯಾಲಿಟಿ ಶೋಗೆಂದು ಬ್ರಿಟನ್ಗೆ ತೆರಳಿದ್ದ ವೇಳೆ ರಾಜ್ ಕುಂದ್ರಾರನ್ನು ನಿರ್ದೇಶ ಫರಾತ್ ಹುಸೇನ್ ಮುಖಾಂತರ ಮೊದಲ ಬಾರಿಗೆ ಭೇಟಿ ಮಾಡಿದ್ದೆ. ಇದಾದ ಬಳಿಕ 2009ರಲ್ಲಿ ನಾನು ಹಾಗೂ ರಾಜ್ ಕುಂದ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟೆವು. ಮದುವೆಗೂ ಮುನ್ನವೇ ನಾನು ರಾಜ್ ಕುಂದ್ರಾ ಬಳಿ ಭಾರತದಲ್ಲೇ ನೆಲೆಸುವುದಾಗಿ ಹೇಳಿದ್ದೆ. ಇದೇ ಕಾರಣಕ್ಕೆ ನಾವು ಮದುವೆಯಾದ ಬಳಿಕವೂ ಭಾರತದಲ್ಲೇ ಉಳಿದೆವು ಎಂದು ಶಿಲ್ಪಾ ತಿಳಿಸಿದ್ದಾರೆ.
2009ರಲ್ಲಿ ರಾಜ್ ಕುಂದ್ರಾ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೇಲೆ 75 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಇದರಲ್ಲಿ ನಾಲ್ಕು ಮಂದಿ ಅಂತಾರಾಷ್ಟ್ರೀಯ ಪಾರ್ಟ್ನರ್ಗಳು ಇದ್ದರು. ಇದರಲ್ಲಿ ರಾಜ್ ಕುಂದ್ರಾ ಪಾಲು 13 ಪ್ರತಿಶತವಿತ್ತು. ರಾಜ್ ಕುಂದ್ರಾ ವಿರುದ್ಧ ಬೆಟ್ಟಿಂಗ್ ದಂಧೆ ಆರೋಪ ಕೇಳಿಬರುತ್ತಿದ್ದಂತೆಯೇ ರಾಜಸ್ಥಾನ ರಾಯಲ್ಸ್ ತಂಡದಿಂದ ಕುಂದ್ರಾ ಹೊರಬಿದ್ದಿದ್ದರು.
2012ರಲ್ಲಿ ಕುಂದ್ರಾ ಸತ್ಯಯುಗ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಆರಂಭಿಸಿದ್ರು. 2015ರಲ್ಲಿ ಕುಂದ್ರಾ ವಿಯಾನ್ ಇಂಡಸ್ಟ್ರೀಸ್ನ್ನು ಹುಟ್ಟುಹಾಕಿದರು. ಈ ಕಂಪನಿಯಲ್ಲಿ 24.50 ಪ್ರತಿಶತ ನನ್ನ ಪಾಲು ಕೂಡ ಇದೆ. ಈ ಕಂಪನಿಯಲ್ಲಿ 7 ಮಂದಿ ಶೇರ್ ಹೋಲ್ಡರ್ಗಳು ಇದ್ದಾರೆ.
ರಾಜ್ ಕುಂದ್ರಾ ವಿಯಾನ್ ಇಂಡಸ್ಟ್ರೀಸ್ ನಿರ್ದೇಶಕರಾಗಿದ್ದರೆ ಉಮೇಶ್ ಕಾಮತ್ ಎಕ್ಸಿಕ್ಯೂಟಿವ್ ಅಸಿಸ್ಟಂಟ್ ಆಗಿದ್ದರು. ನಾನು 2015ರಿಂದ ಕಳೆದ ವರ್ಷದವರೆಗೂ ಈ ಕಂಪನಿಯ ನಿರ್ದೇಶಕಿಯಾಗಿದ್ದೆ. ಆದರೆ ವೈಯಕ್ತಿಕ ಕಾರಣಗಳಿಂದಾಗಿ ನನ್ನ ಹುದ್ದೆಗೆ ರಾಜೀನಾಮೆ ನೀಡಿದೆ.
2020ರ ಡಿಸೆಂಬರ್ ತಿಂಗಳಲ್ಲಿ ಜೆಎಲ್ ಸ್ಟ್ರೀಮ್ ಎಂಬ ಕಂಪನಿಯನ್ನು ಆರಂಭಿಸಲಾಯ್ತು. ಇದು ಸ್ಟ್ರೀಮಿಂಗ್ ಅಪ್ಲಿಕೇಶನ್, ಶಾರ್ಟ್ ವಿಡಿಯೋ ನಿರ್ಮಾಣ, ಚಾಟಿಂಗ್ ಅಪ್ಲಿಕೇಶನ್ಗಳನ್ನು ನಡೆಸಲು ಈ ಕಂಪನಿ ನಿರ್ಮಾಣವಾಗಿತ್ತು. ಇಲ್ಲಿ ರಾಜ್ ಕುಂದ್ರಾ ಸಿಇಓ ಆಗಿದ್ದರು. ಇಲ್ಲಿ ಸುಮಾರು 40 ಮಂದಿ ಕೆಲಸ ಮಾಡುತ್ತಿದ್ದರು.
2018ರಲ್ಲಿ ನಾನು ಶಿಲ್ಪಾ ಯೋಗ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಹುಟ್ಟುಹಾಕಿದೆ. ಇಲ್ಲಿಯ ಎಲ್ಲಾ ವ್ಯವಹಾರಗಳನ್ನು ಕಂಪನಿ ನಿರ್ದೇಶಕಿ ಅನಿಶಿ ಶರ್ಮಾ ನೋಡಿಕೊಳ್ಳುತ್ತಿದ್ದರು. ಮನೀಷ್ ಕುಮಾರ್ ಸಹಭಾಗಿತ್ವದಲ್ಲಿ 2018ರಲ್ಲಿ ಎಸ್ಎಸ್ಕೆ ಕಂಪನಿ ಸ್ಥಾಪನೆಯಾಯಿತು. ಈ ಕಂಪನಿಯಲ್ಲಿ ನನ್ನ ಪಾಲು 70 ಪ್ರತಿಶತ ಹಾಗೂ ಮನೀಷ್ 30 ಪ್ರತಿಶತ ಪಾಲನ್ನು ಹೊಂದಿದ್ದರು.
ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ನನ್ನ ಹಾಗೂ ರಾಜ್ ಕುಂದ್ರಾರ ಜಾಯಿಂಟ್ ಅಕೌಂಟ್ ಇದೆ. ಇದೇ ಖಾತೆ ಮೂಲಕ ರಾಜ್ ಗೃಹ ಸಾಲ ಪಡೆದಿದ್ದಾರೆ. ನನ್ನ ಇತರೆ ಬ್ಯಾಂಕ್ ಖಾತೆಗಳಿಂದ ಈ ಖಾತೆಗೆ ಗೃಹ ಸಾಲ ತೀರಿಸುವ ಸಲುವಾಗಿ ಹಣ ವರ್ಗಾವಣೆ ಮಾಡಿದ್ದೆ ಎಂದು ಶಿಲ್ಪಾ ಹೇಳಿದ್ದಾರೆ.
ನನಗೆ ಈ ಓಟಿಟಿ ಬಗ್ಗೆ ನಿಜಕ್ಕೂ ಯಾವುದೇ ಮಾಹಿತಿ ಇರಲಿಲ್ಲ. ನಾನು ನನ್ನದೇ ಕೆಲಸಗಳಲ್ಲಿ ನಿರತಳಾಗಿದ್ದರಿಂದ ರಾಜ್ ಕುಂದ್ರಾ ಯಾವೆಲ್ಲ ವ್ಯವಹಾರಗಳನ್ನು ನಡೆಸುತ್ತಾರೆ ಅನ್ನೋದ್ರ ಬಗ್ಗೆ ಕಣ್ಣಿಟ್ಟಿರಲಿಲ್ಲ. ಅಲ್ಲದೇ ರಾಜ್ ಕೂಡ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಚರ್ಚೆಗಳನ್ನು ನನ್ನ ಜೊತೆ ಮಾಡುತ್ತಿರಲಿಲ್ಲ. ಇದೇ ಕಾರಣಕ್ಕೆ ನನಗೆ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಶಿಲ್ಪಾ ಹೇಳಿದ್ದಾರೆ.