ಖ್ಯಾತ ಸಾಹಿತಿ ಜಾವೇದ್ ಅಖ್ತರ್ ನಟಿ ಕಂಗನಾ ರಣಾವತ್ ವಿರುದ್ಧ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರದಲ್ಲಿ ದೊಡ್ಡ ಬೆಳವಣಿಗೆಯೊಂದು ಸಂಭವಿಸಿದೆ. ವಿಚಾರಣೆ ಹಾಜರಾಗದ ನಟಿ ಕಂಗನಾ ರಣಾವತ್ ವಿರುದ್ಧ ಜಾವೇದ್ ಅಖ್ತರ್ ಬಂಧನದ ವಾರೆಂಟ್ಗೆ ಅರ್ಜಿ ಸಲ್ಲಿಸಿದ್ದಾರೆ. ವರದಿಗಳ ಪ್ರಕಾರ ನಟಿ ಕಂಗನಾ ರಣಾವತ್ ಕಳೆದ 8 ಬಾರಿ ವಿಚಾರಣೆಗೆ ಗೈರಾಗಿದ್ದಾರೆ ಎನ್ನಲಾಗಿದೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ಬಾರಿ ವಿಚಾರಣೆಗೆ ಹಾಜರಾಗದ ನಟಿ ಕಂಗನಾಗೆ ವಿನಾಯ್ತಿ ನೀಡಿದೆ. ಆದರೆ ಮುಂದಿನ ವಿಚಾರಣೆ ವೇಳೆಯೂ ಇದು ಪುನರಾವರ್ತನೆಯಾದಲ್ಲಿ ಬಂಧನ ವಾರೆಂಟ್ ಹೊರಡಿಸುವುದಾಗಿ ಖಡಕ್ ಸೂಚನೆ ನೀಡಿದೆ.
ನಟಿ ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಕಿ, ಕಂಗನಾಗೆ ಕೋವಿಡ್ ರೋಗ ಲಕ್ಷಣಗಳು ಇವೆ .ಹೀಗಾಗಿ ಆಕೆಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ಕೋರ್ಟ್ಗೆ ಹೇಳಿದರು.
ಕಂಗನಾರಿಗೆ ಕೋವಿಡ್ ಪರೀಕ್ಷೆ ನಡೆಸಿ ವರದಿ ಪಾಸಿಟಿವ್ ಬಂದಲ್ಲಿ ಅದನ್ನು ಕೋರ್ಟ್ಗೆ ಸಲ್ಲಿಸುವುದಾಗಿ ಸಿದ್ದಿಕಿ ಹೇಳಿದ್ದಾರೆ. ತಮ್ಮ ಸಿನಿಮಾ ಪ್ರಚಾರಕ್ಕಾಗಿ ಕಂಗನಾ ಒಂದಿಲ್ಲೊಂದು ಕಡೆಗೆ ಪ್ರಯಾಣ ಬೆಳೆಸುತ್ತಲೇ ಇದ್ದಾರೆ. ಇದೇ ಕಾರಣದಿಂದಾಗಿ ಅವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಸಿದ್ದಿಕಿ ಹೇಳಿದ್ದಾರೆ.
ಜಾವೇದ್ ಅಖ್ತರ್ ಪರ ವಕೀಲರು, ಕಂಗನಾ ನ್ಯಾಯಾಲಯದ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ವಾದ ಮಂಡಿಸಿದರು. ರಣಾವತ್ ಬೇಕೆಂತಲೇ ಕಲಾಪವನ್ನು ವಿಳಂಬ ಮಾಡುತ್ತಿದ್ದಾರೆ. ಪ್ರಕರಣವನ್ನು ವಿಳಂಬ ಮಾಡಲೆಂದೇ ರಚಿಸಲಾದ ಉದ್ದೇಶಿತ ತಂತ್ರ ಇದಾಗಿದೆ. ಈ ಮೂಲಕ ಕಂಗನಾ ನ್ಯಾಯಾಂಗ ವ್ಯವಸ್ಥೆಗೆ ಅಗೌರವ ತೋರುತ್ತಿದ್ದಾರೆ ಎಂದು ಹೇಳಿದ್ರು.
ಮುಂದಿನ ವಿಚಾರಣೆಯ ದಿನಾಂಕ ಸೆಪ್ಟೆಂಬರ್ 20ಕ್ಕೆ ನಿಗದಿಯಾಗಿದೆ. ಅಲ್ಲದೇ ಈ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಕಂಗನಾಗೆ ಸೂಚನೆಯನ್ನೂ ನೀಡಿದೆ. ಕೊರೊನಾ ವೈರಸ್ ಸೋಂಕು ತಗುಲದೇ ಹೋದಲ್ಲಿ ಕಂಗನಾ ಮುಂದಿನ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಕಂಗನಾ ಪರ ವಕೀಲ ಸಿದ್ಧಕಿ ಕೋರ್ಟ್ಗೆ ಹೇಳಿದ್ದಾರೆ.