ಬಾಲಿವುಡ್ ಸಿನಿಮಾ ಪ್ರೊಡಕ್ಷನ್ ಹೌಸ್ ಟಿ ಸೀರಿಸ್ ಹಾಗೂ ರಿಲಾಯನ್ಸ್ ಎಂಟರ್ಟೈನ್ಮೆಂಟ್ ಒಂದಾಗಿ 10ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿವೆ.
ಇದರಲ್ಲಿ ಭಾರೀ ದೊಡ್ಡ, ಮಧ್ಯಮ ಹಾಗೂ ಸಣ್ಣ ಬಜೆಟ್ನ ಸಿನಿಮಾಗಳು ಇರಲಿದೆ. ಅಲ್ಲದೇ ಇದು ಭಾರತದ ಸಿನಿಮಾದ ಇತಿಹಾಸದಲ್ಲಿಯೇ ಅತಿದೊಡ್ಡ ಮಟ್ಟದ ಸಹಭಾಗಿತ್ವವಾಗಿದೆ.
ಎರಡು ದೊಡ್ಡ ಸಂಸ್ಥೆಗಳು ಒಂದಾಗಿ 10 ಸಿನಿಮಾಗಳ ನಿರ್ಮಾಣಕ್ಕೆ ಸರಿ ಸುಮಾರು 1000 ಕೋಟಿ ರೂಪಾಯಿ ಹೂಡಿಕೆ ಮಾಡಲಿವೆ. ಈ ಸಹಭಾಗಿತ್ವವವು ವಿವಿಧ ಪ್ರಕಾರ ಸಿನಿಮಾಗಳು, ಹಾಡುಗಳು, ಸಂಗೀತ, ಹೊಸ ಪ್ರತಿಭೆ ಹೀಗೆ ಸಿನಿಮಾ ಇಂಡಸ್ಟ್ರಿಗೆ ಅನೇಕ ಕೊಡುಗೆಗಳನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ.
ಭೂಷಣ್ ಕುಮಾರ್ರ ಟಿ ಸಿರೀಟ್ ಹಾಗೂ ರಿಲಾಯನ್ಸ್ ಎಂಟರ್ಟೈನ್ಮೆಂಟ್ 100ಕ್ಕೂ ಅಧಿಕ ಸಿನಿಮಾಗಳ ಸಂಗೀತ ಮಾರುಕಟ್ಟೆಗೆ ಸಹಭಾಗಿತ್ವ ಹೊಂದಿದೆ. ಆದರೆ ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಲಿವೆ. ಸಾಕಷ್ಟು ಸಿನಿಮಾಗಳು ವಿವಿಧ ಹಂತಗಳಲ್ಲಿ ಇದೆ ಎನ್ನಲಾಗಿದೆ.
2 ದೈತ್ಯ ಪ್ರೊಡಕ್ಷನ್ ಹೌಸ್ಗಳು ಒಂದಾಗಿ ನಿರ್ಮಿಸುತ್ತಿರುವ 10 ಸಿನಿಮಾಗಳ ಪೈಕಿ ಕನಿಷ್ಟ ಮೂರು ಸಿನಿಮಾ ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗಲಿದೆ. ಮೂರು ಸಿನಿಮಾಗಳು ಮಲ್ಟಿ ಸ್ಟಾರ್ ಚಿತ್ರಗಳಾಗಿರಲಿವೆ.
ಮುಂದಿನ ದಿನಗಳಲ್ಲಿ ಬರುವ ಸಿನಿಮಾಗಳಲ್ಲಿ ಒಂದು ತಮಿಳು ಬ್ಲಾಕ್ ಬಸ್ಟರ್ ಚಿತ್ರ ಹಿಂದಿಗೆ ರಿಮೇಕ್ ಆಗಲಿದೆ. ಆ್ಯಕ್ಷನ್ ಥ್ರಿಲ್ಲರ್ ಹಾಗೂ ಐತಿಹಾಸಿಕ ಸಿನಿಮಾ, ಕೋರ್ಟ್ ರೂಮ್ ಡ್ರಾಮಾ, ಹಾಸ್ಯ, ರೋಮ್ಯಾಟಿಂಕ್, ನೈಜ ಘಟನೆ ಆಧಾರಿತ ಹಾರರ್ ಸಿನಿಮಾ ಹೀಗೆ ನಾನಾ ಕಥಾಹಂದರಗಳನ್ನು ಹೊಂದಿರಲಿದೆ.