ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಉಪಚುನಾವಣೆಯು ಈಗಾಗಲೇ ಸಾಕಷ್ಟು ಕಾರಣಕ್ಕೆ ಕುತೂಹಲ ಕೆರಳಿಸಿದೆ. ಮತ್ತೊಂದು ಅಚ್ಚರಿಯ ವಿಚಾರ ಅಂದರೆ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಮೂವರು ಪ್ರಮುಖ ನಾಯಕರು ವಕೀಲ ವೃತ್ತಿ ವ್ಯಾಸಂಗ ಮಾಡಿದವರೇ ಆಗಿದ್ದಾರೆ..!
ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಜೋಗೇಶ್ ಚಂದ್ರ ಕಾಲೇಜಿನಲ್ಲಿ 1982ರಲ್ಲಿ ಎಲ್ಎಲ್ಬಿ ವ್ಯಾಸಂಗ ಮಾಡಿದ್ದಾರೆ. ಆರಂಭದ ದಿನಗಳಲ್ಲಿ ಮಮತಾ ಕೋರ್ಟ್ನಲ್ಲಿ ಪ್ರ್ಯಾಕ್ಟೀಸ್ ಕೂಡ ಮಾಡಿದ್ದರು.
ಮಮತಾ ಬ್ಯಾನರ್ಜಿ ಎಲೆಕ್ಷನ್ ಏಜೆಂಟ್ ಆಗಿರುವ ಟಿಎಂಸಿ ನಾಯಕ ಬೈಶ್ಯಾನೋರ್ ಚಟರ್ಜಿ ಈ ವಿಚಾರವಾಗಿ ಮಾತನಾಡಿದ್ದು, ದೀದಿಯನ್ನು ನಾವು ಕೋರ್ಟ್ನಲ್ಲಿ ನೋಡಿದ್ದೇವೆ. ಇವರು ಕಾಂಗ್ರೆಸ್ನಲ್ಲಿದ್ದ ವೇಳೆ ನಮ್ಮ ನಾಯಕರಾದ ಪಂಕಜ್ ಬ್ಯಾನರ್ಜಿ ಬಂಧನವಾಗಿತ್ತು. ಆಗ ಕೋರ್ಟ್ನಲ್ಲಿ ನಿಂತ ಮಮತಾ, ಪಂಕಜ್ ಬ್ಯಾನರ್ಜಿಗೆ ಜಾಮೀನು ಕೊಡಿಸಿದ್ದರು. ದೀದಿ ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಸಿದ್ದಾರೆ. ಹೀಗಾಗಿ ದೀದಿ ಹಿರಿಯ ರಾಜಕಾರಣಿ ಮಾತ್ರವಲ್ಲದೇ ಹಿರಿಯ ವಕೀಲೆ ಕೂಡ ಹೌದು ಎಂದು ಹೇಳಿದ್ದಾರೆ.
ಪ್ರಿಯಾಂಕಾ ಟಿಬ್ರೆವಾಲ್ ಹಜ್ರಾ ಕೂಡ ಕಾನೂನು ವಿಭಾಗದಲ್ಲೇ ವ್ಯಾಸಂಗ ಮಾಡಿದ್ದಾರೆ. ಇವರು ಬಿಜೆಪಿ ಪರ ಹೋರಾಡಿದ ಪ್ರಸಿದ್ಧ ವಕೀಲೆ ಕೂಡ ಹೌದು. 2021ರ ಚುನಾವಣಾ ಫಲಿತಾಂಶದ ಬಳಿಕ ಚುನಾವಣೋತ್ತರ ಹಿಂಸಾಚಾರಗಳ ಬಗ್ಗೆ ಹೋರಾಡಿದ್ದರು.
ಈ ಪ್ರಕರಣದಲ್ಲಿ ವಕೀಲರಾಗಿ ಪ್ರಿಯಾಂಕಾರ ಕಾರ್ಯಕ್ಷಮತೆ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಇದೇ ಇವರಿಗೆ ಚುನಾವಣೆ ಟಿಕೆಟ್ ಸಿಗಲು ಪ್ರಮುಖ ಕಾರಣ ಎಂಬ ಮಾತು ಕೂಡ ಇದೆ. ಈ ವಿಚಾರವಾಗಿ ಮಾತನಾಡಿದ ಪ್ರಿಯಾಂಕಾ, ನಾನು ಕೋರ್ಟ್ನಲ್ಲಿ ಈಗಾಗಲೇ ಮಮತಾ ಬ್ಯಾನರ್ಜಿಯವರನ್ನು ಸೋಲಿಸಿದ್ದೇನೆ. ಎರಡನೇ ಬಾರಿ ನಾನು ಅವರನ್ನು ಚುನಾವಣಾ ಅಖಾಡದಲ್ಲಿ ಸೋಲಿಸುತ್ತೇನೆ ಎಂದು ಹೇಳಿದ್ದಾರೆ.
ಸಿಪಿಐ(ಎಂ) ಅಭ್ಯರ್ಥಿ ಶ್ರೀಜಿಬ್ ವಿಶ್ವಾಸ್ ಕೂಡ ಅಲಿಪುರ ಕೋರ್ಟ್ನ ವಕೀಲರಾಗಿದ್ದಾರೆ. ಇವರು ಹಜ್ರಾ ಕಾನೂನು ಕಾಲೇಜಿನ ಹಳೆಯ ವಿದ್ಯಾರ್ಥಿ. 2014ರಿಂದ ಅವರು ವಕೀಲಿ ವೃತ್ತಿಯನ್ನು ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ವಿಶ್ವಾಸ್, ಇದು ನಿಜಕ್ಕೂ ಒಂದು ಕಾಕತಾಳೀಯ ವಿಚಾರ. ನಾನು ಮಮತಾ ಬ್ಯಾನರ್ಜಿಯನ್ನು ವಕೀಲೆ ಎಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರು ರಾಜಕಾರಣಿ ಮಾತ್ರ. ಪ್ರಿಯಾಂಕಾ ಹಿರಿಯ ವಕೀಲೆ. ಆದರೆ ಕಾನೂನು ಯುದ್ಧಕ್ಕೂ ರಾಜಕೀಯ ಯುದ್ಧಕ್ಕೂ ತುಂಬಾನೇ ವ್ಯತ್ಯಾಸವಿದೆ ಎಂದು ಹೇಳಿದ್ರು.