ಔಪಚಾರಿಕ ಹಾಗೂ ಅನೌಪಚಾರಿಕ ವಲಯಗಳ ಒಟ್ಟು 1.9 ಲಕ್ಷಕ್ಕೂ ಅಧಿಕ ಮಂದಿ ಆಗಸ್ಟ್ ತಿಂಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಗ್ರಾಮೀಣ ಹಾಗೂ ನಗರಾದ್ಯಂತ ನಿರುದ್ಯೋಗ ಪ್ರಮಾಣ ಮಿತಿಮೀರಿದೆ ಎಂದು ತಿಳಿದುಬಂದಿದೆ.
ಜುಲೈ ತಿಂಗಳಲ್ಲಿ 7 ಪ್ರತಿಶತ ಇದ್ದ ನಿರುದ್ಯೋಗ ಪ್ರಮಾಣವು ಆಗಸ್ಟ್ ತಿಂಗಳ ವೇಳೆ 8.3 ಪ್ರತಿಶತಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. ಈ ಮೂಲಕ ಜುಲೈವರೆಗೆ 37.5 ಪ್ರತಿಶತ ಇದ್ದ ಉದ್ಯೋಗ ದರವು ಆಗಸ್ಟ್ ತಿಂಗಳ ವೇಳೆಗೆ 37.2 ಪ್ರತಿಶತಕ್ಕೆ ಇಳಿಕೆಯಾಗಿದೆ.
ಮುಖ್ಯವಾಗಿ ಕೃಷಿ ವಲಯದಲ್ಲಿ ಉದ್ಯೋಗಗಳಲ್ಲಿ ಅನಿಶ್ಚಿತತೆ ಕಂಡು ಬಂದಿದೆ. ಆಗಸ್ಟ್ನಲ್ಲಿ ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಪ್ರಮಾಣವು 8.7 ದಶಲಕ್ಷಕ್ಕೆ ಕುಸಿದಿದೆ. ವ್ಯಾಪಾರಿ ಕ್ಷೇತ್ರದಲ್ಲಿ ಉದ್ಯೋಗವು ಸುಮಾರು 4ಮಿಲಿಯನ್ ಏರಿಕೆ ಕಂಡಿದೆ. ಸಣ್ಣ ವ್ಯಾಪಾರಿ ಮತ್ತು ದಿನಗೂಲಿ ಕಾರ್ಮಿಕರ ಸಂಖ್ಯೆಯು 2.1 ಮಿಲಿಯನ್ ಆಗಿದೆ. ವೇತನ ಉದ್ಯೋಗವು 0.7 ಮಿಲಿಯನ್ನಷ್ಟು ಹೆಚ್ಚಾಗಿದೆ ಎಂದು ಸಿಎಂಐಇ ಹೇಳಿದೆ.
ಕೃಷಿ ವಲಯಗಳಲ್ಲಿ ಕೆಲಸ ಕಳೆದುಕೊಂಡ ವ್ಯಕ್ತಿಗಳು ಸೇವಾ ವಲಯದತ್ತ ಮುಖಮಾಡಿದ್ದಾರೆ. ಕೈಗಾರಿಕಾ ವಲಯದಲ್ಲೂ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗಿದೆ. ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಆಗಸ್ಟ್ ತಿಂಗಳಲ್ಲಿ ಉದ್ಯೋಗಿಗಳ ಸಂಖ್ಯೆಯು ಕ್ಷೀಣಿಸಿದ್ದು 2.5 ಮಿಲಿಯನ್ ಆಗಿದೆ. ಇದನ್ನು ನೋಡಿದರೆ ಕಾರ್ಖಾನೆಗಳು ಉದ್ಯೋಗಿಗಳಿಗೆ ವಿಶ್ವಾಸಾರ್ಹ ಮೂಲವಲ್ಲ ಎಂದು ಸಿಎಂಐಇ ಅಭಿಪ್ರಾಯ ಪಟ್ಟಿದೆ.