ಕೊರೊನಾ ಹಾವಳಿಯಿಂದ ಜಗತ್ತಿನಲ್ಲಿ ಪ್ರಾಣ ಕಳೆದುಕೊಂಡವರು ಲಕ್ಷಗಟ್ಟಲೆ ಮಂದಿ. ಅವರ ಕುಟುಂಬಸ್ಥರಲ್ಲಿ ಕೆಲವರು ಆಘಾತದಿಂದ ಚೇತರಿಸಿಕೊಂಡರೆ, ಮತ್ತೆ ಕೆಲವರ ಮನೆಯಲ್ಲಿ ಇನ್ನೂ ಕೂಡ ಕತ್ತಲೆ ಕವಿದಿದೆ. ಇಂಥ ಕುಟುಂಬಗಳಿಗೆ ಬೆಳಕನ್ನು ಚೆಲ್ಲುವ ರೀತಿಯಲ್ಲಿ ಸ್ಫೂರ್ತಿದಾಯಕವಾದ ಕೆಲಸವನ್ನು ಅಮೆರಿಕದ ಕೊಲೆರಡೊದ ಸರಕಾರಿ ನರ್ಸ್ ಲೌರಾ ವೀಸ್ ಮಾಡಿದ್ದಾರೆ.
ಅವರು ಕೆಲಸ ಮಾಡುವ ಬೌಲ್ಡರ್ ಕೌಂಟಿ ಆಸ್ಪತ್ರೆಯಲ್ಲಿ ಕಳೆದ ಫೆಬ್ರುವರಿಯಲ್ಲಿ ಅವರಿಗೆ ನಿವೃತ್ತಿಯ ವಿದಾಯ ಹೇಳಲಾಯಿತು. ಆ ವೇಳೆ ಅವರು ಉಡುಗೊರೆಯಾಗಿ ಕೇಳಿ ಪಡೆದಿದ್ದು, ಕೊರೊನಾ ಲಸಿಕೆಗಳ ಖಾಲಿ ಬಾಟಲಿಗಳನ್ನು !
ಶೀಘ್ರವೇ ಅನಿವಾರ್ಯವಾಗಲಿದೆ ಕೊರೊನಾ ಲಸಿಕೆ 4ನೇ ಡೋಸ್
ಈ ಸಣ್ಣ ಬಾಟಲಿಗಳೇ ಕೊರೊನಾದ ಕಾರ್ಮೋಡವನ್ನು ಬದಿಗೊತ್ತಿ ಮನುಕುಲದಲ್ಲಿ ಆಶಾಕಿರಣ ಮೂಡಿಸಿದ್ದು. ಲಸಿಕೆಗಳು ಬಂದ ಮೇಲೆಯೇ ಕೊರೊನಾ ರಣಕೇಕೆ ತಣ್ಣಗಾಗಿದ್ದು ಎಂದು ಅರಿತಿದ್ದ ನರ್ಸ್ ಲೌರಾ ಅವರು ಬಾಟಲಿಗಳನ್ನು ಸೀದಾ ತೆಗೆದುಕೊಂಡು ಹೋಗಿದ್ದು ಅಲಂಕಾರಿಕ ದೀಪ ತಯಾರಿಕನ ಬಳಿಗೆ.
ಆತನಿಗೆ ಬಲ್ಬ್ ಗಳ ಜಾಗದಲ್ಲಿ ಈ ಬಾಟಲಿಯನ್ನು ಬಳಸಿಕೊಂಡು, ಸೂಕ್ತ ವೈರಿಂಗ್ ಜೊತೆಗೆ ಸುಂದರವಾದ ತೂಗುವ ದೀಪಗುಚ್ಛ ಮಾಡು ಎಂದು ನರ್ಸ್ ಸೂಚಿಸಿದರು.
ಆಕೆಯ ವಿಶಿಷ್ಟ ಆಲೋಚನೆ, ಸದುದ್ದೇಶದಿಂದ ಪ್ರೇರಿತನಾದ ಎಲೆಕ್ಟ್ರೀಷಿಯನ್ ಕೂಡ ಹರಸಾಹಸಪಟ್ಟು ಕೊನೆಗೂ ಸುಂದರ ದೀಪಗುಚ್ಛ ತಯಾರಿಸಿಯೇ ಬಿಟ್ಟ. ಈ ವಿಶಿಷ್ಟ ಯಶೋಗಾಥೆಯನ್ನು ಫೇಸ್‍ಬುಕ್‍ನಲ್ಲಿ ಲೌರಾ ಪರವಾಗಿ ಸರಕಾರಿ ಆಸ್ಪತ್ರೆಯು ಹಂಚಿಕೊಂಡಿದೆ.