ಮುಂಬೈ: ರಿಲಯನ್ಸ್ ಜಿಯೋ ಬಹು ನಿರೀಕ್ಷಿತ 4ಜಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಜಿಯೋಫೋನ್ ನೆಕ್ಸ್ಟ್ ಅನ್ನು ಗಣೇಶ ಹಬ್ಬದ ದಿನ ಅಂದರೆ ಸೆಪ್ಟೆಂಬರ್ 10ರಂದು ಬಿಡುಗಡೆ ಮಾಡಲಿದೆ.
ಗೂಗಲ್ ಅಭಿವೃದ್ಧಿಪಡಿಸಿದ ಸ್ಮಾರ್ಟ್ ಫೋನ್ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ನ ಆಪ್ಟಿಮೈಸ್ಡ್ ಆವೃತ್ತಿಯನ್ನು ರನ್ ಮಾಡುತ್ತದೆ. ಸಾಧನದ ಬೆಲೆಯು ಇನ್ನು ಕೂಡ ಅಸ್ಪಷ್ಟವಾಗಿ ಉಳಿದಿದೆ. ವಿಶೇಷತೆಗಳ ಪ್ರಕಾರ, ಜಿಯೋಫೋನ್ ನೆಕ್ಸ್ಟ್ ಹೊಂದಿರುವ ಗ್ರಾಹಕರು ಗೂಗಲ್ ಪ್ಲೇ ಸ್ಟೋರ್ ಸೇರಿದಂತೆ ಆಂಡ್ರಾಯ್ಡ್ ಸೇವೆಗಳಿಗೆ ಪ್ರವೇಶ ಪಡೆಯುತ್ತಾರೆ.
ಇನ್ನು ಇದರಲ್ಲಿ ಘೋಷಿಸಲಾಗಿರುವ ಕೆಲವು ವೈಶಿಷ್ಟ್ಯಗಳಲ್ಲಿ ಧ್ವನಿ ಸಹಾಯಕ, ಸ್ವಯಂಚಾಲಿತ ಸ್ಕ್ರೀನ್ ಪಠ್ಯದ ಓದುವಿಕೆ, ಭಾಷಾ ಅನುವಾದ ಮತ್ತು ಸ್ಮಾರ್ಟ್ ಕ್ಯಾಮರಾ ಸೇರಿವೆ.
“ಜಿಯೋಫೋನ್ ನೆಕ್ಸ್ಟ್, ಸಂಪೂರ್ಣ ವೈಶಿಷ್ಟ್ಯಪೂರ್ಣ ಸ್ಮಾರ್ಟ್ ಫೋನ್ ಆಗಿದ್ದು, ಗೂಗಲ್ ಹಾಗೂ ಜಿಯೋ ಎರಡರಿಂದಲೂ ಸಂಪೂರ್ಣ ಅಪ್ಲಿಕೇಶನ್ ಅನ್ನು ಬೆಂಬಲಿಸುತ್ತದೆ” ಎಂದು ಎಜಿಎಂ ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಮುಖೇಶ್ ಅಂಬಾನಿ ಹೇಳಿದ್ದಾರೆ.
“ಜಿಯೋದಿಂದ ನೀವು ನಿರೀಕ್ಷಿಸಿದಂತೆ ಜಿಯೋಫೋನ್ ನೆಕ್ಸ್ಟ್ ಇದುವರೆಗೆ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಅತ್ಯಂತ ಉತ್ತಮ ಸ್ಮಾರ್ಟ್ ಫೋನ್ ಗಳಲ್ಲಿ ಒಂದಾಗಿದೆ ಎಂಬುದು ನನ್ನ ಭರವಸೆ” ಎಂದು ಅಂಬಾನಿ ಹೇಳಿದರು.
ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ವಿಕೃತಿ ವಿಡಿಯೋ, ವೇಶ್ಯಾವಾಟಿಕೆ ಕೇಸ್; NIA ಚಾರ್ಜ್ ಶೀಟ್ ಸಲ್ಲಿಕೆ
ಎಜಿಎಂ ನಲ್ಲಿ, ರಿಲಯನ್ಸ್ ಜಿಯೋ ಕಂಪನಿಯು ಜಿಯೋ 5ಜಿ ಪರಿಹಾರಗಳು ಹಾಗೂ ಅದರ ಇತರೆ ಆಂತರಿಕ ಸೇವೆಗಳಾದ ಜಿಯೋಸಾವ್ನ್, ಜಿಯೋ ಮಾರ್ಟ್ ಮತ್ತು ಹೆಚ್ಚಿನವುಗಳಿಗೆ ಶಕ್ತಿ ತುಂಬಲು ಗೂಗಲ್ ಕ್ಲೌಡ್ ಅನ್ನು ಬಳಸುವುದಾಗಿ ಘೋಷಿಸಿತ್ತು. ಇತ್ತೀಚಿನ ಪಾಲುದಾರಿಕೆಯೊಂದಿಗೆ ರಿಲಯನ್ಸ್, ದೇಶದ ಆರೋಗ್ಯ ಮತ್ತು ಶಿಕ್ಷಣ ಉದ್ಯಮದಲ್ಲಿ ಡಿಜಿಟಲ್ ಸೇವೆಗಳನ್ನು ವೇಗಗೊಳಿಸಲು ಆಶಿಸುತ್ತದೆ.
ಈ ವಾರದ ಆರಂಭದಲ್ಲಿ, ಜಿಯೋ ತನ್ನ 5ನೇ ವಾರ್ಷಿಕೋತ್ಸವವನ್ನು ಭಾರತದಲ್ಲಿ ಪೂರ್ಣಗೊಳಿಸಿತು. ಹೀಗಾಗಿ ಹಲವಾರು ಟೆಕ್ ದೈತ್ಯ ಕಂಪನಿಗಳಾದ ಗೂಗಲ್, ಶಿಯೋಮಿ, ಓನ್ ಪ್ಲಸ್ ಮತ್ತು ಹಲವು ತಂತ್ರಜ್ಞಾನದ ದೈತ್ಯ ಕಂಪನಿಗಳು ಜಿಯೋಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದವು.