2014ರಲ್ಲಿ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡುವ ಮೂಲಕ ಇಡೀ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನೇ ನೀಡಿದ್ದರು ಮಹೇಂದ್ರ ಸಿಂಗ್ ಧೋನಿ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮೂರನೇ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನೇತೃತ್ವವನ್ನು ವಹಿಸಿದ್ದ ಧೋನಿ ಟೆಸ್ಟ್ ಜೀವನಕ್ಕೆ ನಿವೃತ್ತಿ ಘೋಷಿಸುವ ಮೂಲಕ ವಿರಾಟ್ ಕೊಹ್ಲಿಗೆ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದರು.
ಈ ರೀತಿ ನಿವೃತ್ತಿ ಘೋಷಣೆ ಮಾಡುವ ಮುನ್ನ ಧೋನಿ ಒಂದೇ ಒಂದು ಸುಳಿವನ್ನೂ ಸಹ ನೀಡಿರಲಿಲ್ಲ. ಹೀಗಾಗಿ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವಿಚಾರ ಅಭಿಮಾನಿಗಳನ್ನು ದಿಗ್ಬ್ರಮೆಗೊಳಿಸಿತ್ತು. ಟೆಸ್ಟ್ ಸರಣಿಯ ಬಳಿಕ ಟೀಂ ಇಂಡಿಯಾವು ತ್ರಿಕೋನ ಸರಣಿ ಹಾಗೂ 2015ರ ವಿಶ್ವಕಪ್ ಆಡಬೇಕಾದ್ದರಿಂದ ಧೋನಿ ಮುಂದಿನ ಮೂರು ತಿಂಗಳು ಆಸ್ಟ್ರೇಲಿಯಾದಲ್ಲೇ ಉಳಿದಿದ್ದರು.
ಧೋನಿ ಟೆಸ್ಟ್ ಜೀವನಕ್ಕೆ ವಿದಾಯ ಹೇಳಿದ ದಿನಗಳನ್ನು ಮೆಲಕು ಹಾಕಿರುವ ಟೀಂ ಇಂಡಿಯಾ ಆಟಗಾರ ಆರ್. ಅಶ್ವಿನ್ ಕೆಲ ವಿಚಾರಗಳನ್ನು ಶೇರ್ ಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಇಡೀ ರಾತ್ರಿ ಟೆಸ್ಟ್ ಕ್ರಿಕೆಟ್ನ ಜೆರ್ಸಿಯನ್ನೇ ಧರಿಸಿದ್ದರು ಹಾಗೂ ಕಣ್ಣೀರು ಕೂಡ ಹಾಕಿದ್ದರು ಎಂದು ಅಶ್ವಿನ್ ಹೇಳಿದ್ದಾರೆ. ಅಶ್ವಿನ್ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಕಳೆದ ವರ್ಷ ಆಗಸ್ಟ್ 15ರಂದು ಈ ವಿಡಿಯೋ ರಿಲೀಸ್ ಮಾಡಿದ್ದರು. ಇದೇ ದಿನದಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.
2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ದಿನ ನನಗೆ ಇನ್ನೂ ನೆನಪಿದೆ. ಮೆಲ್ಬೋರ್ನ್ನಲ್ಲಿ ಪಂದ್ಯವನ್ನು ಉಳಿಸಿಕೊಳ್ಳಲು ನಾನು ಕೂಡ ಧೋನಿ ಜೊತೆ ಸೇರಿ ಹೋರಾಡುತ್ತಿದ್ದೆ, ಆದರೆ ನಾವು ಸೋತ ಬಳಿಕ ಸ್ಟಂಪ್ ಹಿಡಿದುಕೊಂಡ ಧೋನಿ ಆಯ್ತು ನನ್ನ ಕೆಲಸ ಎಂದು ಹೇಳಿದ್ದರು. ಅದು ಅವರಿಗೆ ತುಂಬಾ ಭಾವನಾತ್ಮಕ ಘಳಿಗೆಯಾಗಿತ್ತು. ಇಶಾಂತ್ ಶರ್ಮಾ, ಸುರೇಶ್ ರೈನಾ ಹಾಗೂ ನಾನು ಸಂಜೆ ಧೋನಿ ಕೋಣೆಯಲ್ಲೇ ಕುಳಿತಿದ್ದೆವು. ಅವರು ಅದೇ ಟೆಸ್ಟ್ ಜೆರ್ಸಿಯನ್ನು ಇಡೀ ರಾತ್ರಿ ಧರಿಸಿದ್ದರು ಹಾಗೂ ಹನಿ ಕಣ್ಣೀರನ್ನೂ ಸುರಿಸಿದ್ದರು ಎಂದು ಅಶ್ವಿನ್ ಹೇಳಿದ್ದಾರೆ.
2005ರಲ್ಲಿ ಚೆನ್ನೈನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದ ಮೂಲಕ ಟೆಸ್ಟ್ ಜೀವನಕ್ಕೆ ಪಾದಾರ್ಪಣೆ ಮಾಡಿದ್ದ ಧೋನಿ 90 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 2008 ರಲ್ಲಿ ಅನಿಲ್ ಕುಂಬ್ಳೆ ನಿವೃತ್ತಿ ಬಳಿಕ ಧೋನಿ ಟೀಂ ಇಂಡಿಯಾದ ಜವಾಬ್ದಾರಿ ವಹಿಸಿದ್ದರು. ಟೀಂ ಇಂಡಿಯಾದ ಯಶಸ್ವಿ ಟೆಸ್ಟ್ ಕ್ರಿಕೆಟ್ ನಾಯಕ ಎಂಬ ಹೆಗ್ಗಳಿಕೆಯನ್ನೂ ಸಂಪಾದಿಸಿದ್ದ ಧೋನಿ 60 ಪಂದ್ಯಗಳ ನಾಯಕತ್ವದಲ್ಲಿ 27 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.