ಭಗವದ್ಗೀತೆ ಹಾಗೂ ಕೌಟಿಲ್ಯ ಅರ್ಥಶಾಸ್ತ್ರವನ್ನು ಭಾರತೀಯ ಸೇನೆಯ ತರಬೇತಿ ಪಠ್ಯಕ್ರಮದಲ್ಲಿ ಸೇರಿಸುವ ಪ್ರಸ್ತಾವನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಭಾರತೀಯ ಸೇನೆಯಲ್ಲಿ ರಾಜಕೀಯ ಬೆರೆಸಬೇಡಿ ಎಂದು ಹೇಳಿದೆ.
ಸೇನೆ ವಿಚಾರದಲ್ಲಿ ಆದರೂ ಸರ್ಕಾರ ರಾಜಕೀಯ ಮಾಡುವುದನ್ನು ಬಿಡಬೇಕು. ಕಾರ್ಗಿಲ್ ಯುದ್ಧವನ್ನು ನಾವು ಮುಸ್ಲಿಂ ಯೋಧರ ಸಹಾಯದಿಂದ ಗೆದ್ದಿದ್ದೇವೆ ಎಂದು ಕಾಂಗ್ರೆಸ್ ವಕ್ತಾರ ಕೆ.ಕೆ. ಮಿಶ್ರಾ ಹೇಳಿದ್ದಾರೆ.
ಡಿಫೆನ್ಸ್ ಮ್ಯಾನೇಜ್ಮೆಂಟ್ ಕಾಲೇಜು ಇತ್ತೀಚಿಗೆ ನಡೆಸಿದ ಆಂತರಿಕ ಅಧ್ಯಯನದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಹಾಗೂ ಭಗವದ್ಗೀತೆಯನ್ನು ಮಿಲಿಟರಿ ತರಬೇತಿ ಪಠ್ಯಕ್ರಮದಲ್ಲಿ ಸೇರಿಸುವ ಬಗ್ಗೆ ಶಿಫಾರಸ್ಸು ಮಾಡಿದ ಬಳಿಕ ಕಾಂಗ್ರೆಸ್ ಈ ರೀತಿ ಟೀಕೆ ಮಾಡಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಯನ್ನು ಮಾಡಲು ಭಾರತೀಯ ಸಂಸ್ಕೃತಿ ಅಧ್ಯಯನ ವೇದಿಕೆ ನಿರ್ಮಿಸುವಂತೆ ಸಲಹೆ ನೀಡಿದೆ.
ತೆಲಂಗಾಣದ ಸಿಕಂದರಾಬಾದ್ ನಲ್ಲಿರುವ ಸಿಡಿಎಂ ಟ್ರೈ ಸರ್ವೀಸ್ ಮಿಲಿಟರಿ ತರಬೇತಿ ಸಂಸ್ಥೆಯಾಗಿದೆ. ಇಲ್ಲಿ ಭೂ ಸೇನೆ, ವಾಯುಪಡೆ ಹಾಗೂ ನೌಕಾಪಡೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಪ್ರಾಚೀನ ಭಾರತದ ಸಂಸ್ಕೃತಿ ಹಾಗೂ ಯುದ್ಧ ತಂತ್ರಗಳ ಗುಣಲಕ್ಷಣ ಹಾಗೂ ಇಂದಿನ ಕಾರ್ಯತಂತ್ರದ ಜೊತೆ ಸಂಯೋಜನೆ ಮಾಡುವ ಗುರಿಯನ್ನು ಈ ಯೋಜನೆಯು ಹೊಂದಿದೆ.