ಉತ್ತರ ಪ್ರದೇಶದ ಮೀರತ್ ಕಂಟೋನ್ಮೆಂಟ್ಗೆ ನೇಮಕವಾಗಿದ್ದ ಯೋಧ ಮೂವರನ್ನು ಮದುವೆಯಾಗಿದ್ದ ಕಾರಣಕ್ಕೆ ಜೈಲುಪಾಲಾಗಿದ್ದಾರೆ. ಬಂಧಿತ ಯೋಧನನ್ನು ಮನೀಶ್ ಕುಮಾರ್ ಎಂದು ಗುರುತಿಸಲಾಗಿದೆ.
ಮೊದಲನೇ ಪತ್ನಿ ಜೀವಂತ ಇರುವಾಗಲೇ ಮನೀಶ್ ಮೋಸದಿಂದ ಇನ್ನಿಬ್ಬರನ್ನು ಮದುವೆ ಆಗಿದ್ದರು. ಆದರೆ ಇವರ ಕಳ್ಳಾಟ ಆಗಸ್ಟ್ 27ರಂದು ಬೆಳಕಿಗೆ ಬಂದಿದೆ.
ಹೀಗಾಗಿ ಮೂವರು ಪತ್ನಿಯರು ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ.
ಮನೀಶ್ ಕುಮಾರ್ 2ನೇ ಪತ್ನಿ ದೂರು ದಾಖಲಿಸಿದ ಬಳಿಕ ಪೊಲೀಸರು ಮನೀಶ್ರನ್ನು ಬಂಧಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮನೀಶ್ರ ಮೂರನೇ ಪತ್ನಿ ಕೂಡ ಗರ್ಭಿಣಿಯಾಗಿದ್ದರು ಎನ್ನಲಾಗಿದೆ.
ಹರಿಯಾಣದ ಕುರುಕ್ಷೇತ್ರ ನಿವಾಸಿಯಾಗಿದ್ದ ಮನೀಶ್ ಕುಮಾರ್ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲ ಪತ್ನಿ ತಮ್ಮ ಮಕ್ಕಳ ಜೊತೆ ಪತಿಯ ಮನೆಯಲ್ಲಿ ವಾಸವಿದ್ದಾರೆ.
ಶೀಲಾ ಸಿಂಗ್ ಎಂಬವರು ಕಂಕಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಪ್ರಕಾರ ನಾನು ಮನೀಶ್ರನ್ನು ಹೈದರಾಬಾದ್ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆ. 2014ರಲ್ಲಿ ನಾನು ಹಾಗೂ ಮನೀಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೆವು. 2016ರಲ್ಲಿ ನಾನು ಗರ್ಭ ಧರಿಸಿದ್ದೆ ಆದರೆ ಮನೀಶ್ ಕೆಟ್ಟದಾಗಿ ವರ್ತಿಸಿದ್ದರಿಂದ ತಾವು ಗರ್ಭಪಾತ ಮಾಡಿಸಿಕೊಂಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2018ರಲ್ಲಿ ಮನೀಶ್ ತಾನು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನೆಪವೊಡ್ಡಿ ಭೂಗತನಾಗಿದ್ದ. ಆದರೆ ಶೀಲಾ 2019ರಲ್ಲಿ ಮೀರತ್ನಲ್ಲಿ ಮನೀಶ್ರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆಗ ಮನೀಶ್ 510 ಆರ್ಮಿ ಬೇಸ್ ಕಾರ್ಯಾಗಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇದಾದ ಬಳಿಕ ಶೀಲಾ ಹಾಗೂ ಮನೀಶ್ ಬಾಡಿಗೆ ಮನೆಯಲ್ಲಿ ವಾಸಿಸಲು ಆರಂಭಿಸಿದರು. ಈ ವೇಳೆ ಶೀಲಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದಾದ ಬಳಿಕ ಶೀಲಾಗೆ ಮನೀಶ್, ಚಾಂದನಿ ಅನ್ಸಾರಿ ಎಂಬವರ ಜೊತೆ ವಿವಾಹವಾಗಿ ಶ್ರದ್ಧಾಪುರಿಯಲ್ಲಿ ಸಂಸಾರ ಮಾಡುತ್ತಿದ್ದಾರೆ ಎಂಬ ವಿಚಾರ ತಿಳಿದಿದೆ.
ಆಗಸ್ಟ್ 26ರಂದು ಅನ್ಸಾರಿ ಮನೆಗೆ ತೆರಳಿದ ಶೀಲಾ, ಪತಿ ಮನೀಶ್ ಕಳ್ಳಾಟ ಬಯಲು ಮಾಡಿದ್ದಾರೆ. ಇದಾದ ಬಳಿಕ ಮೂವರೂ ಪೊಲೀಸ್ ಠಾಣೆಗೆ ತೆರಳಿದ್ದಾರೆ.
ಇವರಲ್ಲಿ ಶೀಲಾ, ಪತಿ ಮನೀಶ್ ವಿರುದ್ಧ ದೂರನ್ನು ನೀಡಿದ್ದಾರೆ. ಮನೀಶ್ರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.