ಬೆಂಗಳೂರು: ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಬದಲಾವಣೆ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಈ ಬಾರಿ ಕನ್ನಡಿಗರಿಗೇ ಕಮಿಷನರ್ ಹುದ್ದೆ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ, ಗೃಹ ಇಲಾಖೆ ಬಗ್ಗೆ ಸಂಪೂರ್ಣ ಅರಿವನ್ನು ಹೊಂದಿದ್ದು, ಈ ಬಾರಿ ಕನ್ನಡಿಗರಿಗೆ ಬೆಂಗಳೂರು ನಗರ ಕಮಿಷನರ್ ಪಟ್ಟ ನೀಡುವ ಬಗ್ಗೆ ಆಸಕ್ತಿ ತೋರಿದ್ದು, ಈ ನಿಟ್ಟಿನಲ್ಲಿ ಡಿಜಿ ಮತ್ತು ಐಜಿಪಿ ಬಳಿ ರ್ಯಾಂಕಿಂಗ್ ಪಟ್ಟಿ ಕೇಳಿದ್ದಾರೆ.
ರಾಜ್ ಕುಂದ್ರಾ – ಶಿಲ್ಪಾ ಶೆಟ್ಟಿ ದಂಪತಿಗೆ ಎದುರಾಯ್ತು ಮತ್ತೊಂದು ಸಂಕಷ್ಟ
ರ್ಯಾಂಕಿಂಗ್ ಲೆಕ್ಕಾಚಾರದ ಪ್ರಕಾರ ಬಳ್ಳಾರಿ ಮೂಲದ ಬಿ.ದಯಾನಂದ್ ಅವರಿಗೆ ಕಮಿಷನರ್ ಪಟ್ಟ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಭಾಷೆ ಮೇಲಿನ ಹಿಡಿತ, ನಗರ ನಿಭಾಯಿಸುವ ಸಾಮರ್ಥ್ಯ ಹಾಗೂ ಜನಸಾಮಾನ್ಯರನ್ನು ಸಂಭಾಳಿಸುವ ರೀತಿ ಆಧಾರದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರ ಆಯ್ಕೆ ನಡೆಯಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಪ್ತಚರ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂಬ ಹೆಗ್ಗಳಿಕೆಯೂ ದಯಾನಂದ್ ಅವರ ಮೇಲಿದ್ದು, ಹಲವು ಕಾರಣಗಳಿಂದ ದಯಾನಂದ್ ಅವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.