ಟೀಂ ಇಂಡಿಯಾದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಇಂದು ಎಲ್ಲಾ ಮಾದರಿಯ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. 6 ಟೆಸ್ಟ್, 14 ಏಕದಿನ ಪಂದ್ಯ ಹಾಗೂ 3 ಟಿಟ್ವೆಂಟಿ ಸರಣಿಗಳಲ್ಲಿ ಬಿನ್ನಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.
ಹ್ಯಾಮಿಲ್ಟನ್ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆ ಮಾಡಿದ್ದ ಕನ್ನಡಿಗ ಸ್ಟುವರ್ಟ್ ಬಿನ್ನಿ, ಏಕದಿನ ಪಂದ್ಯದಲ್ಲಿ 230 ರನ್ ಹಾಗೂ 20 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಬಿನ್ನಿ ಟೀಂ ಇಂಡಿಯಾದ ಅತ್ಯುತ್ತಮ ಬೌಲರ್ಗಳ ಪಟ್ಟಿಯಲ್ಲಿ ಈಗಲೂ ಸ್ಥಾನ ಪಡೆದಿದ್ದಾರೆ. 2014ರಲ್ಲಿ ಬಾಂಗ್ಲಾದೇಶದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ 58 ರನ್ಗಳಲ್ಲಿ ಅಲೌಟ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸ್ಟುವರ್ಟ್ ಬಿನ್ನಿ ಟೀಂ ಇಂಡಿಯಾದ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ 1983ರಲ್ಲಿ ವಿಶ್ವಕಪ್ ವಿಜೇತ ಟೀಂ ಇಂಡಿಯಾ ತಂಡದ ಸದಸ್ಯ ರೋಜರ್ ಬಿನ್ನಿ ಅವರ ಪುತ್ರರಾಗಿದ್ದಾರೆ. ಐಪಿಎಲ್ ಪಂದ್ಯಾವಳಿಯಲ್ಲಿ ಬಿನ್ನಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ್ದಾರೆ.