ಕಾಬೂಲ್: ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ತತ್ತರಿಸಿ ಹೋಗಿರುವ ಅಪ್ಘಾನ್ ಸರ್ಕಾರ ಅಧಿಕೃತವಾಗಿ ಶರಣಾಗಿದ್ದು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವುದಾಗಿ ಘೋಷಿಸಿದೆ.
ಅಪ್ಘಾನಿಸ್ತಾನದ ಕಂದಹಾರ್, ಲಷ್ಕರ್ ವಾಗ್, ಘಾಜ್ನಿ, ರಾಜಧಾನಿ ಕಾಬೂಲ್ ನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಉಗ್ರರು ಅಧ್ಯಕ್ಷ ಆಶ್ರಫ್ ಘನಿಗೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವಂತೆ ಒತ್ತಾಯಿಸಿದ್ದಾರೆ. ಬೇರೆ ದಾರಿಯಿಲ್ಲದೇ ಅಪ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಮಾಜಿ ಸಚಿವ ಅಲಿ ಅಹ್ಮದ್ ಜಲಾಲಿಗೆ ಅಧಿಕಾರ ಹಸ್ತಾಂತರಿಸುವ ಮೂಲಕ ರಾಜೀನಾಮೆ ಘೋಷಿಸಿದ್ದಾರೆ.
ಅಪ್ಘಾನ್ ಸರ್ಕಾರದ ಅಧಿಕಾರ ಹಸ್ತಾಂತರವಾಗುತ್ತಿದ್ದಂತೆ ಕಾಬೂಲ್ ಜೈಲನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ಸುಮಾರು 5000 ಉಗ್ರರನ್ನು ಬಿಡುಗಡೆಗೊಳಿಸಿದ್ದಾರೆ. ಇಡೀ ದೇಶ ಇಸ್ಲಾಮಿಕ್ ಎಮಿರೇಟ್ಸ್ ನಿಯಂತ್ರಣಕ್ಕೆ ಬಂದಿದೆ. ಯಾರೂ ದೇಶವನ್ನು ಬಿಟ್ಟು ಹೋಗುವಂತಿಲ್ಲ, ಪ್ರತಿಕಾರ ತೀರಿಸಿಕೊಳ್ಳುವಂತಿಲ್ಲ. ಎಲ್ಲರೂ ಸ್ವಂತ ದೇಶದಲ್ಲಿರಬೇಕೆಂಬುದು ತಾಲಿಬಾನ್ ಉದ್ದೇಶ. ಜವಾಬ್ದಾರಿಯುತ ಸರ್ಕಾರ ಎಲ್ಲರಿಗೂ ಒಪ್ಪಿತವಾದದ್ದು ಎಂದು ತಾಲಿಬಾನಿಗಳು ಎಚ್ಚರಿಸಿದ್ದಾರೆ.
ಇದೇ ವೇಳೆ ತಾಲಿಬಾನಿ ಉಗ್ರರ ಕಮಾಂಡರ್ ಆಗಿದ್ದ ಮುಲ್ಲಾ ಅಬ್ದುಲ್ ಅಪ್ಘಾನಿಸ್ತಾನದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.