ಮುಂದಿನ ತಿಂಗಳು ಅರಬ್ ರಾಷ್ಟ್ರದಲ್ಲಿ ನಡೆಯಲಿರುವ 2021ನೇ ಸಾಲಿನ ಐಪಿಎಲ್ ಪಂದ್ಯಾವಳಿಯ ಕೆಲ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಎಲ್ಲಾ ಐಪಿಎಲ್ ತಂಡದ ಆಟಗಾರರಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಇಂಡಿಯನ್ ಬೋರ್ಡ್ ಹೇಳಿದೆ.
ಬ್ಯಾಟ್ಸಮನ್ ಸಿಕ್ಸರ್ ಬಾರಿಸಿದ ವೇಳೆ ಬೌಲ್ ಸ್ಟೇಡಿಯಂನಿಂದ ಹೊರಗೆ ಬಿದ್ದಲ್ಲಿ ಆ ಬಾಲ್ ನ್ನು ಫೋರ್ಥ್ ಅಂಪೈರ್ ಬದಲಾಯಿಸಬೇಕು ಹಾಗೂ ಸ್ಯಾನಿಟೈಸ್ ಮಾಡಬೇಕು ಎಂದು ಬಿಸಿಸಿಐ ಹೇಳಿದೆ.
ಕ್ರಿಕೆಟ್ ಬಾಲ್ ಸ್ಟೇಡಿಯಂನಿಂದ ಹೊರಗೆ ಬಿದ್ದಲ್ಲಿ, ಫೋರ್ಥ್ ಅಂಪೈರ್ ಬೇರೆ ಚೆಂಡನ್ನು ಬೌಲರ್ಗೆ ನೀಡಬೇಕು. ಹಾಗೂ ಸ್ಟೇಡಿಯಂನಿಂದ ಆಚೆ ಬಿದ್ದಿದ್ದ ಚೆಂಡನ್ನು ಆಲ್ಕೋಹಾಲ್ ಅಂಶವುಳ್ಳ ದ್ರಾವಣಗಳ ಸಹಾಯದಿಂದ ಸ್ಯಾನಿಟೈಸ್ ಮಾಡಬೇಕು ಎಂದು ಹೇಳಲಾಗಿದೆ.
ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಈ ಹೊಸ ನಿಯಮಾವಳಿಯನ್ನು ಜಾರಿಗೆ ತರಲಾಗಿದೆ ಎಂದು ಬಿಸಿಸಿಐ ಹೇಳಿದೆ. ಒಂದು ಸಣ್ಣ ಅಜಾಗರೂಕತೆಯೂ ಆಗಬಾರದು ಎಂಬ ಕಾರಣಕ್ಕೆ ಸಣ್ಣ ಸಣ್ಣ ವಿಷಯಗಳ ಮೇಲೂ ಗಮನ ಹರಿಸಲಾಗ್ತಿದೆ. ಮೇ ತಿಂಗಳಲ್ಲಿ ರದ್ದಾಗಿದ್ದ ಐಪಿಎಲ್ ಪಂದ್ಯವು ಮುಂದಿನ ತಿಂಗಳಿನಿಂದ ಅರಬ್ ರಾಷ್ಟ್ರದಲ್ಲಿ ಮುಂದುವರಿಯಲಿದೆ.
ಎಂಜಲು ಹಾಗೂ ಮೂಗಿನ ದ್ರವವನ್ನು ವಾಶ್ರೂಮ್ ಹೊರತುಪಡಿಸಿ ಬೇರೆಲ್ಲೂ ಉಗುಳುವಂತಿಲ್ಲ ಎಂದು ಬಿಸಿಸಿಐ ಎಲ್ಲಾ ಐಪಿಎಲ್ ತಂಡಗಳಿಗೆ ಖಡಕ್ ವಾರ್ನಿಂಗ್ ನೀಡಿದೆ.
ಐಪಿಎಲ್ ತಂಡದ ಪ್ರತಿಯೊಬ್ಬ ಸದಸ್ಯರೂ ಟಿಶ್ಯೂ ಪೇಪರ್ ಹೊಂದಿರಬೇಕು.ಹಾಗೂ ಅದನ್ನು ನಿಗದಿಪಡಿಸಲಾದ ಕಸದಬುಟ್ಟಿಯಲ್ಲೇ ಎಸೆಯಬೇಕು ಎಂದು ಹೇಳಲಾಗಿದೆ.
ಐಪಿಎಲ್ ಪಂದ್ಯದಲ್ಲಿ ಭಾಗಿಯಾಗಲಿರುವ ಪ್ರತಿಯೊಬ್ಬ ಸದಸ್ಯರಿಗೂ 6 ದಿನಗಳ ಐಸೋಲೇಷನ್ ಕಡ್ಡಾಯವಾಗಿ ಇರಲಿದೆ. ಬಯೋಬಬಲ್ಗೆ ಎಂಟ್ರಿ ಕೊಡುವ ಮುನ್ನ ಮೂರು ನೆಗೆಟಿವ್ ವರದಿ ಹೊಂದಿರಬೇಕು ಎಂದೂ ಷರತ್ತು ವಿಧಿಸಲಾಗಿದೆ.