ತನ್ನ ಗರ್ಲ್ಫ್ರೆಂಡ್ಅನ್ನು ಕೊಂದ ವ್ಯಕ್ತಿಯೊಬ್ಬ ಆಕೆಯ ದೇಹವನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋದ ಘಟನೆ ದಕ್ಷಿಣ ದೆಹಲಿಯಲ್ಲಿ ಜರುಗಿದೆ. ಘಟನೆ ಭಾನುವಾರ ಸಂಜೆ ಜರುಗಿದೆ.
ಮಹಿಳೆಯ ದೇಹವು ಮೈದಾನ್ ಗರ್ಹಿ ಪ್ರದೇಶದಲ್ಲಿ ಕಂಡುಬಂದಿದೆ. ಕೊಲೆ ಮಾಡಿದ ಬಳಿಕ, ಪೊಲೀಸರಿಗೆ ಅನುಮಾನ ಬಾರದಂತೆ ಮಾಡಲು ಖುದ್ದು ತನ್ನ ಸ್ನೇಹಿತನಿಗೆ ಕೊಲೆಯ ಸಂಗತಿಯನ್ನು ಮುಟ್ಟಿಸಲು ತಿಳಿಸಿದ್ದಾನೆ ಆಪಾದಿತ.
ಅನುಜ್ ಕುಮಾರ್ ಎಂಬ 22 ವರ್ಷದ ಯುವಕ ಕೊಲೆಯ ಆಪಾದಿತನಾಗಿದ್ದಾನೆ. ಲಾಕ್ಡೌನ್ ವೇಳೆ ತನ್ನ ಗರ್ಲ್ಫ್ರೆಂಡ್ ತನ್ನೂರಿಗೆ ಹೋದ ಬಳಿಕ ಅನುಜ್ 30 ವರ್ಷದ ಮಹಿಳೆಯೊಂದಿಗೆ ಸಂಬಂಧದಲ್ಲಿದ್ದ.
ತನ್ನ ಮೊದಲ ಪ್ರೇಯಸಿ ಆಕೆಯ ಊರಿನಿಂದ ಮರಳಿದ ಬಳಿಕ ತನ್ನ ಹೊಸ ಗರ್ಲ್ಫ್ರೆಂಡ್ ಸಹವಾಸದಿಂದ ಆಚೆ ಬರಲು ಹೀಗೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಸ್ನೇಹಿತರ ಸಹಾಯದಿಂದ ಆಕೆಯನ್ನು ಕೊಲ್ಲಲು ಸ್ಕೆಚ್ ಹಾಕಿದ್ದಾನೆ ಅನುಜ್.
ಒಲಂಪಿಕ್ನಲ್ಲಿ ಭಾರತದ ಸ್ವರ್ಣ ಸಾಧನೆ: ‘ನೀರಜ್’ ಹೆಸರಿಗೆ ಈಗ ಫುಲ್ ಡಿಮ್ಯಾಂಡ್..!
“ಅನುಜ್ ಎರಡು ವರ್ಷಗಳ ಹಿಂದೆ ಸಂತ್ರಸ್ತೆಯೊಂದಿಗೆ ಸಂಪರ್ಕದಲ್ಲಿ ಬಂದಿದ್ದಾನೆ. ಗೆಳೆಯ ರಂಜ಼ಾನ್ನ ನೆರವಿನಿಂದ ಈ ಮಹಿಳೆ ಉತ್ತಮ್ ನಗರದಲ್ಲಿರುವ ತನ್ನ ಮನೆಯಿಂದ ಪರಾರಿಯಾಗಿದ್ದಾಳೆ. ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡ ಈ ಇಬ್ಬರು ಲಿವಿಂಗ್ ಟುಗೆದರ್ನಲ್ಲಿದ್ದರು. ಅನುಜ್ನ ಗೆಳೆಯರಾದ ನೌಶದ್ ಮತ್ತು ಕುಮಾರ್ ಸಂತ್ರಸ್ತೆಯನ್ನು ಅರಣ್ಯವೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ರಂಜ಼ಾನ್ ಆಗಲೇ ಬಂದು ಹಾಜರಿದ್ದು, ಆಕೆಯ ಕುತ್ತಿಗೆ ಹಿಸುಕಿ ಆಕೆಯ ದೇಹವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿದ ರಂಜ಼ಾನ್, ಯಾರೋ ಒಬ್ಬ ಮಹಿಳೆಯನ್ನು ಮೋಟರ್ಸೈಕಲ್ನಲ್ಲಿ ಹೊತ್ತೊಯ್ದು ಕೊಂದಿದ್ದನ್ನು ನೋಡಿದ್ದಾಗಿ ಹೇಳಿದ್ದಾನೆ,” ಎಂದು ಡಿಸಿಪಿ (ದಕ್ಷಿಣ) ಅತುಲ್ ಠಾಕೂರ್ ತಿಳಿಸಿದ್ದಾರೆ.
ತನ್ನನ್ನು ಮದುವೆಯಾಗಲು ಅನುಜ್ನನ್ನು ಆತನ ಮೊದಲ ಗರ್ಲ್ಫ್ರೆಂಡ್ ಒತ್ತಾಯ ಹಾಕುತ್ತಿದ್ದ ಕಾರಣ ಮತ್ತೊಬ್ಬ ಗರ್ಲ್ಫ್ರೆಂಡ್ಅನ್ನು ಕೊಲೆ ಮಾಡಲು ಅನುಜ್ ಹಾಗೂ ಆತನ ಸ್ನೇಹಿತರು ಸ್ಕೆಚ್ ಹಾಕಿದ್ದಾರೆ.
ತನಿಖೆ ಸಂದರ್ಭದಲ್ಲಿ ಸಿಸಿ ಟಿವಿ ಫುಟೇಜ್ಗಳನ್ನು ವೀಕ್ಷಿಸಿದ ಪೊಲೀಸರು ರಂಜ಼ಾನ್ನನ್ನು ತನಿಖೆಗೆ ಒಳಪಡಿಸಿದಾಗ ಆತ ಎಲ್ಲವನ್ನೂ ಬಾಯಿ ಬಿಟ್ಟಿದ್ದಾನೆ. ಅಪರಾಧಗೈಯ್ಯಲು ಬಳಸಿದ್ದ ಮೋಟರ್ಸೈಕಲ್ ಮತ್ತು ದುಪಟ್ಟಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.