ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದ ವಿದೇಶಿ ಪ್ರಜೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಬೆಂಗಳೂರು ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಜೆಸಿ ನಗರ ಠಾಣೆಗೆ ಸಿಐಡಿ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಆಫ್ರಿಕನ್ ಪ್ರಜೆಗಳಿಗೆ ಸ್ಥಳೀಯ ಯುವತಿ ಪ್ರಚೋದನೆ ನೀಡಿದ್ದಾರೆ. ಪ್ರತಿಭಟನೆ ವೇಳೆ ಆಕೆ ಆಫ್ರಿಕನ್ ಪ್ರಜೆಗಳ ಪರ ಬ್ಯಾಟಿಂಗ್ ಮಾಡಿ, ಪೊಲೀಸರನ್ನು ಬೈಯ್ಯುತ್ತಿರುವುದು ಕಂಡು ಬಂದಿದೆ. ಆಫ್ರಿಕನ್ ಪ್ರಜೆಗಳಿಗೆ ಪ್ರಚೋದನೆ ನೀಡಿದ ಯುವತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.
ಆಫ್ರಿಕನ್ ಪ್ರಜೆಗಳ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ತಾಳ್ಮೆಯಿಂದ ಆಫ್ರಿಕನ್ ಪ್ರಜೆಗಳ ಮನವೊಲಿಸಲು ಯತ್ನಿಸಲಾಗಿತ್ತು. ಪೊಲೀಸರು ಎಷ್ಟೇ ಮನವರಿಕೆ ಮಾಡಿದರೂ ಅವರು ಕೇಳಲಿಲ್ಲ. ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಗಲಾಟೆ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿಗೆ, ಒಬ್ಬರು ಸಬ್ ಇನ್ಸ್ ಪೆಕ್ಟರ್ ಗೆ ಗಾಯವಾಗಿದೆ. ಗಲಾಟೆ ನಡೆಸಿದ ಯಾರನ್ನೂ ಕೂಡ ಬಿಡುವುದಿಲ್ಲ. ಆಫ್ರಿಕನ್ ಪ್ರಜೆಗಳ ಮೇಲೆ ಎಫ್ಐಆರ್ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.