ಬರೋಬ್ಬರಿ 18 ವರ್ಷಗಳ ಕಾಲ ಅಸ್ತಮಾ ಚಿಕಿತ್ಸೆಗೆ ಒಳಗಾದ 32 ವರ್ಷದ ವ್ಯಕ್ತಿಯೊಬ್ಬರು ಇಷ್ಟು ಸುದೀರ್ಘ ವರ್ಷಗಳ ಕಾಲ ತಮಗೆ ಉಸಿರಾಟದ ಸಮಸ್ಯೆ ಉಂಟಾಗಲು ಕಾರಣವಾಗಿದ್ದೇನು ಅನ್ನೋದನ್ನ ತಿಳಿದು ಶಾಕ್ ಆಗಿದ್ದಾರೆ. 2003ರಲ್ಲಿ ಸೂರಜ್ ಅಕಸ್ಮಾತ್ ಆಗಿ ನುಂಗಿದ್ದ ಪೆನ್ನಿನ ನಿಬ್ ಅವರಿಗೆ ಬರೋಬ್ಬರಿ 18 ವರ್ಷಗಳ ಕಾಲ ಕಾಟ ನೀಡಿದೆ.
ಕೇರಳದ ಅಳುವಾದ ನಿವಾಸಿಯಾದ ಸೂರಜ್ ಎಂಬವರು 9ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಪೆನ್ನಿನ ಸಹಾಯದಿಂದ ಸೀಟಿ ಊದಲು ಹೋಗಿ ಪೆನ್ನಿನ ನಿಬ್ ಅವರ ಗಂಟಲು ಸೇರಿಕೊಂಡಿತ್ತು. ಇದಾದ ಕೂಡಲೇ ಸೂರಜ್ರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಂದು ಮಾಡಿದ ಎಕ್ಸ್ ರೇಯಲ್ಲಿ ಪೆನ್ನಿನ ನಿಬ್ ಗಂಟಲು ಪ್ರವೇಶಿಸಿದ್ದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಇದಾದ ಕೆಲವು ದಿನಗಳ ಬಳಿಕ ಸೂರಜ್ರಿಗೆ ಶ್ವಾಸಕೋಶ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳಲು ಆರಂಭಿಸಿತು. ಇದಾದ ಬಳಿಕ ಸುದೀರ್ಘ 18 ವರ್ಷಗಳ ಕಾಲ ಸೂರಜ್ ಅಸ್ತಮಾ ಕಾಯಿಲೆಗೆ ಚಿಕಿತ್ಸೆ ಪಡೆಯಲು ಆರಂಭಿಸಿದ್ರು.
ಕಳೆದ ವರ್ಷ ಸೂರಜ್ ಕೊರೊನಾ ಸೋಂಕಿಗೆ ಒಳಗಾದ ಸಮಯದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲು ಆರಂಭಿಸಿತು. ತೀವ್ರ ಉಸಿರಾಟ ಸಮಸ್ಯೆ ಎದುರಿಸುತ್ತಿದ್ದ ಸೂರಜ್ ಸಿಟಿ ಸ್ಕ್ಯಾನ್ಗೆ ಒಳಗಾದ ವೇಳೆ ಇವರ ಬಲಭಾಗದ ಶ್ವಾಸಕೋಶದಲ್ಲಿ ಪೆನ್ ನಿಬ್ ಇರುವ ವಿಚಾರ ತಿಳಿದಿದೆ. ಕೊನೆಗೂ 18 ವರ್ಷಗಳ ಕಾಲ ಶ್ವಾಸಕೋಶದಲ್ಲೇ ಅಡಗಿದ್ದ ಪೆನ್ನಿಬ್ನ್ನು ಯಶಸ್ವಿಯಾಗಿ ತೆಗೆಯಲಾಗಿದೆ.