ಹೆಚ್ಚುತ್ತಿರುವ ಕೊರೊನಾ ಪ್ರಕರಣ ಹಿನ್ನೆಲೆಯಲ್ಲಿ ಸಂಪೂರ್ಣ ಲಸಿಕೆ ಪಡೆದವರಿಗೆ ಮಾಸ್ಕ್ನಿಂದ ಮುಕ್ತಿ ನೀಡಿದ್ದ ಆದೇಶವನ್ನ ಅಮೆರಿಕ ವಾಪಸ್ ಪಡೆದಿದೆ. ಈ ಸಂಬಂಧ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು ಅಪಾಯವಿರುವ ಪ್ರದೇಶಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು ಸೂಕ್ತ ಎಂದು ಶಿಫಾರಸು ಮಾಡಲಾಗಿದೆ.
ಡೆಲ್ಟಾ ರೂಪಾಂತರಿಯಿಂದ ಹೆಚ್ಚು ಜಾಗರೂಕರಾಗಿರಬೇಕಾದ ಈ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಬಳಕೆ ಮಾಡುವುದು ಹೆಚ್ಚು ಸೂಕ್ತವಾಗಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರವು ಹೊಸ ಮಾರ್ಗಸೂಚಿಯಲ್ಲಿ ಹೇಳಿದೆ.
2 ತಿಂಗಳ ಹಿಂದೆ ಅಂದರೆ ಮೇ 13ರಂದು ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರವು ಕೊರೊನಾ ಲಸಿಕೆಯ ಎರಡೂ ಡೋಸ್ ಸ್ವೀಕರಿಸಿದವರು ಫೇಸ್ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿತ್ತು.
ಆ ಸಂದರ್ಭದಲ್ಲಿ ಆಲ್ಫಾ ರೂಪಾಂತರಿಗಳು ನಿಯಂತ್ರಣಕ್ಕೆ ಬಂದಿದ್ದವು. ಅಲ್ಲದೇ ಈ ರೂಪಾಂತರಿಗಳು ಡೆಲ್ಟಾದಷ್ಟು ವ್ಯಾಪಕವಾಗಿ ಹರಡುತ್ತಲೂ ಇರಲಿಲ್ಲ. ಆದರೆ ಇದೀಗ ಡೆಲ್ಟಾ ರೂಪಾಂತರಿ ಅಮೆರಿಕಕ್ಕೆ ಕಾಲಿಟ್ಟಿದ್ದು ವ್ಯಾಪಕವಾಗಿ ಹರಡುತ್ತಿದೆ ಎನ್ನಲಾಗಿದೆ.