ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡ್ತಿದ್ದಾರೆ ಎಂಬ ವಿಚಾರ ಕಾವೇರಿರುವ ಬೆನ್ನಲ್ಲೇ ಸಂಸದ ಶ್ರೀನಿವಾಸ್ ಪ್ರಸಾದ್ ಸ್ಫೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ಚಾಮರಾಜನಗರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್ ಹಾಗೂ ಯಡಿಯೂರಪ್ಪ ನಡುವೆ ನಡೆದಿದ್ದ ಒಪ್ಪಂದದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಯಡಿಯೂರಪ್ಪ ಹಾಗೂ ಹೈಕಮಾಂಡ್ ನಡುವೆ ಒಂದು ಒಪ್ಪಂದವಾಗಿತ್ತು. ಅಧಿಕಾರಕ್ಕೆ ಏರುವ ಮುನ್ನವೇ ಹೈಕಮಾಂಡ್ ಯಡಿಯೂರಪ್ಪಗೆ ನೀವು 2 ವರ್ಷಗಳ ಕಾಲ ಮಾತ್ರ ಸಿಎಂ ಆಗಿ ಇರಲಿದ್ದೀರಿ. ನಿಮಗೆ ವಯಸ್ಸಾಗಿದ್ದರೂ ನಾವು ನಿಮ್ಮ ಕೈಗೆ ಅಧಿಕಾರ ನೀಡುತ್ತಿದ್ದೇವೆ. ಆದರೆ ಈ ಅಧಿಕಾರಾವಾಧಿಯಲ್ಲಿ 2ವರ್ಷ ಮಾತ್ರ ನೀವು ಮುಂದುವರಿಯಲಿದ್ದೀರಿ ಎಂದು ಹೈಕಮಾಂಡ್ ಮೊದಲೇ ಬಿಎಸ್ವೈಗೆ ಹೇಳಿತ್ತು ಎಂದು ಸ್ಫೋಟಕ ಮಾಹಿತಿಯೊಂದನ್ನ ಬಾಯ್ಬಿಟ್ಟಿದ್ದಾರೆ.
75 ವರ್ಷಕ್ಕಿಂತ ಮೇಲ್ಪಟ್ಟವರನ್ನ ಸಿಎಂ ಮಾಡಬಾರದು ಅನ್ನೋದು ಬಿಜೆಪಿಯ ನಿಲುವಾಗಿದೆ. ಆದರೆ ವಿಶೇಷ ಸಂದರ್ಭದಲ್ಲಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದರು. ಇದೀಗ ಹೈಕಮಾಂಡ್ ನೀಡಿದ್ದ ಅವಧಿ ಕೊನೆಗೊಂಡಿದೆ. ಹೀಗಾಗಿ ಈ ಹಿಂದಿನ ಮಾತುಕತೆಯಂತೆಯೇ ಯಡಿಯೂರಪ್ಪ ನಡೆದುಕೊಳ್ತಿದ್ದಾರೆ ಎಂದು ಹೇಳಿದ್ದಾರೆ.