ಶಿಮ್ಲಾ: ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಪಾಂಡೋಹ್ ಬಳಿ ಭಾರಿ ಭೂಕುಸಿತ ಉಂಟಾದ ಪರಿಣಾಮ ಚಂಡೀಘಡ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧಿಸಲಾಯಿತು.
ಇದರಿಂದ ನೂರಾರು ಮಂದಿ ವಾಹನ ಸವಾರರು ಪರದಾಡುವಂತಾಯಿತು.
ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಭಾರಿ ಮಳೆಯಾದ ಪರಿಣಾಮ, ಹಲವಾರು ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಮಂಡಿ ಮತ್ತು ಕುಲ್ಲು ಮೂಲಕ ಕಟೌಲಾ ನಡುವಿನ ಪರ್ಯಾಯ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಇದರಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿತು.
ತವರಿಗೆ ಬಾಣಂತನಕ್ಕೆ ಹೋಗಿ ದಾರಿ ತಪ್ಪಿದ ಪತ್ನಿಯಿಂದ ಘೋರ ಕೃತ್ಯ, ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ
ಮುಂದಿನ ಆರು-ಏಳು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಗುಡುಗು, ಮಿಂಚಿನ ಸಹಿತ ಭಾರಿ ಮಳೆಯಾಗಲಿದೆ ಎಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಜುಲೈ 18 ರಿಂದ 20ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕಳೆದ ವಾರವಷ್ಟೇ ಧರ್ಮಶಾಲಾದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮೆಕ್ ಲಿಯೋಡ್ ಗಂಜ್ ನಲ್ಲಿ ಪ್ರವಾಹ ಉಂಟಾದ ಪರಿಣಾಮ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿತ್ತು. ಕಾಂಗ್ರಾ ಸೇರಿದಂತೆ ರಾಜ್ಯದ ಕೆಲವೆಡೆ ಅತಿ ಹೆಚ್ಚು ಮಳೆಯಾಗಿದೆ.
ಇನ್ನು ಘಟನೆಯ ನಂತರ ಮಾತನಾಡಿರುವ ಪ್ರಧಾನಿ ಮೋದಿ, ಧರ್ಮಶಾಲಾದ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಕೂಲಂಕುಶವಾಗಿ ಅವಲೋಕಿಸುತ್ತಿದೆ. ಹಿಮಾಚಲ ಪ್ರದೇಶ ಸರಕಾರಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.