ಕೋವಿಡ್ 19 ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ಗಳು ಕೊರೊನಾ ಸಾವಿನ ಪ್ರಮಾಣವನ್ನ ತಡೆಗಟ್ಟುವಲ್ಲಿ 95 ಪ್ರತಿಶತ ಯಶಸ್ವಿಯಾಗಿದೆ ಎಂದು ಐಸಿಎಂಆರ್ ತನ್ನ ಅಧ್ಯಯನದ ಮೂಲಕ ಹೇಳಿದೆ. ಕೊರೊನಾ ಎರಡನೆ ಅಲೆಯು ಉತ್ತುಂಗದಲ್ಲಿ ಇರುವಾಗ ಅಂದರೆ ಡೆಲ್ಟಾ ರೂಪಾಂತರಿ ವೈರಸ್ ದೇಶದಲ್ಲಿದ್ದ ಸಂದರ್ಭದಲ್ಲಿ ಈ ಅಧ್ಯಯನವನ್ನ ನಡೆಸಲಾಗಿತ್ತು ಎಂದು ನೀತಿ ಆಯೋಗದ ಸದಸ್ಯ ವಿ ಕೆ ಪಾಲ್ ಹೇಳಿದ್ದಾರೆ.
ತಮಿಳುನಾಡಿನ 1,17,525 ಮಂದಿ ಪೊಲೀಸ್ ಅಧಿಕಾರಿಗಳ ಮೇಲೆ ಈ ಅಧ್ಯಯನ ನಡೆಸಲಾಗಿತ್ತು. ಇದರಲ್ಲಿ 17,059 ಮಂದಿ ಪೊಲೀಸರು ಯಾವುದೇ ಲಸಿಕೆಯನ್ನ ಸ್ವೀಕರಿಸಿರಲಿಲ್ಲ. 32,792 ಮಂದಿ ಪೊಲೀಸರು ಮೊದಲ ಡೋಸ್ ಹಾಗೂ 67,673 ಮಂದಿ ಕೊರೊನಾ 2ನೇ ಡೋಸ್ಗಳನ್ನ ಸ್ವೀಕರಿಸಿದ್ದರು. ಕೊರೊನಾ ಲಸಿಕೆ ಪಡೆಯದವರಲ್ಲಿ 20 ಮಂದಿ, ಮೊದಲ ಡೋಸ್ ಪಡೆದವರಲ್ಲಿ 7 ಮಂದಿ ಹಾಗೂ ಎರಡೂ ಡೋಸ್ಗಳನ್ನ ಸ್ವೀಕರಿಸಿದವರಲ್ಲಿ ಕೇವಲ 4 ಮಂದಿ ಮಾತ್ರ ಸೋಂಕಿಗೆ ಬಲಿಯಾಗಿದ್ದಾರೆ.
ಈ ಎಲ್ಲಾ ದತ್ತಾಂಶಗಳನ್ನ ಅವಲೋಕಿಸಿ ನೋಡಿದಾಗ ಮೊದಲ ಡೋಸ್ ಲಸಿಕೆಯು ಕೊರೊನಾ ಸಾವನ್ನ ತಡೆಯುವಲ್ಲಿ 82 ಪ್ರತಿಶತದಷ್ಟು ಯಶಸ್ವಿಯಾದರೆ ಎರಡೂ ಡೋಸ್ ಲಸಿಕೆಯು 95 ಪ್ರತಿಶತದಷ್ಟು ಕೊರೊನಾ ಸಾವನ್ನ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ. ದೇಶದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿದ್ದ ಸಂದರ್ಭದಲ್ಲಿ ಅಂದರೆ ಡೆಲ್ಟಾ ರೂಪಾಂತರಿಗಳು ವ್ಯಾಪಿಸುತ್ತಿದ್ದಾಗಲೇ ಈ ಅಧ್ಯಯನವನ್ನ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.