ಕೋವಿಡ್ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದ ಮಂದಿಯಲ್ಲಿ ಸೋಂಕು ಮತ್ತೊಮ್ಮೆ ಕಂಡುಬಂದಿದ್ದಲ್ಲಿ ಅದು ಡೆಲ್ಟಾ ವೇರಿಯೆಂಟ್ ವೈರಾಣು ಎಂದು ಭಾರತೀಯ ಮದ್ದು ಸಂಶೋಧನಾ ಪ್ರಾಧಿಕಾರ (ಐಸಿಎಂಆರ್) ತಿಳಿಸಿದೆ.
ಕೋವಿಡ್ ಲಸಿಕೆ ಪಡೆದ ಬಳಿಕವೂ ಸೋಂಕು ತಗುಲುವ ವಿಚಾರವಾಗಿ ಅಧ್ಯಯನ ಮಾಡುತ್ತಿರುವ ಐಸಿಎಂಆರ್, ಈ ಸಂಬಂಧ ಲಸಿಕೆ ಪಡೆದ 677 ಮಂದಿಯನ್ನು ಪರೀಕ್ಷೆ ಮಾಡಿದೆ. ಕೋವಿಡ್ ಲಸಿಕೆ ಪಡೆದವರ ಪೈಕಿ ಮತ್ತೊಮ್ಮೆ ಸೋಂಕು ತಗುಲಿದವರಿಗೆ ಸಾವಿನ ಸಾಧ್ಯತೆ ಬಹಳ ಕಡಿಮೆ ಎಂದು ಐಸಿಎಂಆರ್ ತಿಳಿಸಿದೆ.
ಪರೀಕ್ಷೆಗೆ ಒಳಪಟ್ಟ 677 ಮಂದಿಯಲ್ಲಿ 71 ಮಂದಿ ಕೋವ್ಯಾಕ್ಸಿನ್ ಪಡೆದಿದ್ದರೆ ಮಿಕ್ಕವರು ಕೋವಿಶೀಲ್ಡ್ ಪಡೆದಿದ್ದಾರೆ. ಇದೇ ವೇಳೆ ಲಸಿಕೆ ಪಡೆದವರಲ್ಲೂ ಮೂವರು ಮೃತಪಟ್ಟಿದ್ದಾರೆ. 17 ರಾಜ್ಯಗಳಿಂದ ಈ ಮಂದಿಯನ್ನು ಆರಿಸಲಾಗಿದ್ದು, ಅವರೆಲ್ಲರ ಆರ್‌ಟಿ-ಪಿಸಿಆರ್ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಲಾಗಿದೆ.
ನಟಿ ಕರೀನಾ ಕಪೂರ್ ವಿರುದ್ದ ಕ್ರಿಶ್ಚಿಯನ್ ಸಮುದಾಯದಿಂದ ದೂರು ದಾಖಲು
ಸೋಂಕಿಗೆ ತುತ್ತಾಗುವ ಮುನ್ನ ಲಸಿಕೆ ಪಡೆದ ಮಂದಿಯ ಜೀನಾಮಿಕ್ ವಿಶ್ಲೇಷಣೆ ನಡೆಸಿದ ಐಸಿಎಂಆರ್, ಇವರ ಪೈಕಿ 86.1% ಮಂದಿಗೆ ಸೋಂಕು ತಗುಲಿರುವುದು ಡೆಲ್ಟಾ ಅವತರಣಿಕೆಯ ವೈರಸ್‌ನಿಂದ (B.1.617.2) ಎಂದು ತಿಳಿಸಿದೆ.
ಇದೇ ವೇಳೆ ಒಟ್ಟಾರೆ ಕೋವಿಡ್-19 ಪ್ರಕರಣಗಳ ಪೈಕಿ 9.8% ಮಂದಿಗೆ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿದ್ದು, 0.4% ಪ್ರಕರಣಗಳಲ್ಲಿ ಮಾತ್ರವೇ ಈ ಸೋಂಕು ಮಾರಣಾಂತಿಕವಾಗಿವೆ ಎಂದು ಅಧ್ಯಯನ ತಿಳಿಸುತ್ತದೆ.
ಲಸಿಕೆ ಪಡೆಯುವುದರಿಂದ ಅಸ್ಪತ್ರೆ ಸೇರಬೇಕಾದ ಅಗತ್ಯ ತಗ್ಗಿ, ಮಾರಣಾಂತಿಕ ಸಾಧ್ಯತೆಗಳು ತಗ್ಗುತ್ತವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.