ನಟ ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣವು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದರ್ಶನ್ ಆಪ್ತರ ನಡುವೆ ಆರೋಪ ಪ್ರತ್ಯಾರೋಪಗಳ ನಡುವೆಯೇ ಪ್ರಕರಣದ ಆರೋಪಿ ಅರುಣಾ ಕುಮಾರಿ ಇಷ್ಟೆಲ್ಲಾ ಆಗೋಕೆ ನಿರ್ಮಾಪಕ ಉಮಾಪತಿಯೇ ನೇರ ಕಾರಣ ಎಂದು ದೂರಿದ್ದಾರೆ.
ಈ ಪ್ರಕರಣದಲ್ಲಿ ನಟ ದರ್ಶನ್ ನಿಜಕ್ಕೂ ಅಮಾಯಕ. ಆದರೆ ಉಮಾಪತಿಯವರದ್ದು ಸಂಪೂರ್ಣ ತಪ್ಪಿದೆ. ನನ್ನ ಲೈಫ್ ಹಾಳಾದರೆ ಅದಕ್ಕೆ ಉಮಾಪತಿಯೇ ನೇರ ಕಾರಣ. ನಾನು ಲೋನ್ಗೆ ಅಪ್ರೋಚ್ ಮಾಡಿದ್ದೆ ಅಷ್ಟೇ. ಲೋನ್ ಅಪ್ರೋಚ್ ಮಾಡೋಕೂ ಅಪ್ಲೈ ಮಾಡೋಕು ತುಂಬಾನೇ ವ್ಯತ್ಯಾಸ ಇದೆ.
ಸುದ್ದಿಗೋಷ್ಠಿಯಲ್ಲಿ ಉಮಾಪತಿ ನನ್ನ ಪರಿಚಯ ಇರಲಿಲ್ಲ ಎಂದೆಲ್ಲ ಹೇಳಿದ್ದಾರೆ. ಆದರೆ ನನಗೆ ಅವರು ಮಾರ್ಚ್ 30ರಿಂದಲೇ ಪರಿಚಯವಾಗಿದ್ದರು. ನಟ ದರ್ಶನ್ರನ್ನ ನೇರವಾಗಿ ಭೇಟಿಯಾಗೋದು ಅಂದರೆ ಯಾರಿಂದಲೂ ಅಷ್ಟು ಸುಲಭವಾಗಿ ಆಗೋ ಕೆಲಸವಲ್ಲ. ಅಂತದ್ರಲ್ಲಿ ನಾನು 2 ಬಾರಿ ಅವರನ್ನ ಭೇಟಿಯಾಗಿದ್ದೇನೆ ಅಂದರೆ ನನ್ನ ಹಿಂದೆ ಯಾರಿದ್ದರು ಅನ್ನೋದನ್ನ ನೀವೇ ಊಹೆ ಮಾಡಿ ಎಂದಿದ್ದಾರೆ.
ಉಮಾಪತಿ ಹಾಗೂ ಹರ್ಷ ನಡುವೆ ಸಮಸ್ಯೆ ಇದ್ದರೆ ಅವರೇ ಬಗೆಹರಿಸಿಕೊಳ್ಳಬಹುದಿತ್ತು. ಉಮಾಪತಿ ನೇರವಾಗಿ ದರ್ಶನ್ರಿಗೆ ಹರ್ಷ ಬಗ್ಗೆ ಹೇಳಬಹುದಿತ್ತು. ಈ ರೀತಿ ನನ್ನನ್ನ ಏಕೆ ಮಧ್ಯಕ್ಕೆ ಸಿಲುಕಿಸುತ್ತಿದ್ದಾರೆ ಅನ್ನೋದೇ ಗೊತ್ತಾಗುತ್ತಿಲ್ಲ. ಈ ಘಟನೆಗಳ ಬಳಿಕ ನಾನು ಡಿಪ್ರೆಷನ್ಗೆ ಹೋಗಿದ್ದೇನೆ. ಕಷ್ಟವೋ ಸುಖವೋ ನಾನು ಹೇಗೋ ಬದುಕುತ್ತೇನೆ. ನನ್ನನ್ನ ನನ್ನ ಪಾಡಿಗೆ ಬಿಟ್ಟು ಬಿಡಿ. ನಾಳೆ ನನ್ನ ಲೈಫ್ ಹಾಳಾದರೆ ದರ್ಶನ್ ಆಗಲಿ ಉಮಾಪತಿಯಾಗಲಿ ಅದನ್ನ ಸರಿ ಮಾಡೋಕೆ ಬರೋದಿಲ್ಲ ಎಂದು ಹೇಳಿದ್ರು.
ಕುಮಾರ್ ನನ್ನ ಪತಿ ಎಂದು ಹೇಳಿಕೊಳ್ಳೋಕೆ ನನಗೆ ನಾಚಿಗೆ ಆಗುತ್ತದೆ. ಆತನಿಂದ ನನ್ನ ಕೆಲ ಫೋಟೋಗಳನ್ನ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಉಮಾಪತಿಗೆ ಲಾಭ ಏನಿದೆ ಅಥವಾ ನಷ್ಟವಿದೆಯಾ ನನಗೆ ಗೊತ್ತಿಲ್ಲ. ನನಗಂತೂ ಇದರಿಂದ ನಯಾಪೈಸೆ ಲಾಭವಿಲ್ಲ. ಆದರೆ ನನ್ನನ್ನ ಇದರಲ್ಲಿ ಉಮಾಪತಿ ಎಳೆಯಬಾರದಿತ್ತು. ನನಗೆ ಈಗ ಆತ್ಮಹತ್ಯೆ ಮಾಡಿಕೊಳ್ಳೋಣ ಎನಿಸುತ್ತಿದೆ. ನಾನು ಅವರೊಂದಿಗೆ ಜನರಲ್ ಆಗಿಯೇ ಚಾಟ್ ಮಾಡಿದ್ದೆ. ನಿಮ್ಮ ಅಕ್ಕ ತಂಗಿಗೆ ನೀವು ಇದೇ ರೀತಿ ಸಂದೇಶ ಕಳಿಸುತ್ತಿದ್ರಾ ಎಂದು ಉಮಾಪತಿಗೆ ಅರುಣಾ ಕುಮಾರಿ ಪ್ರಶ್ನೆ ಮಾಡಿದ್ದಾರೆ.