ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಆರೋಪ ಇದೀಗ ದಚ್ಚು ಸ್ನೇಹಿತರ ವಿರುದ್ಧವೇ ಬೊಟ್ಟು ಮಾಡಿ ತೋರಿಸುತ್ತಿದೆ. ನಿರ್ಮಾಪಕ ಉಮಾಪತಿ, ಅರುಣಾ ಕುಮಾರಿ ಬಗ್ಗೆ ಒಂದು ರೀತಿಯ ಹೇಳಿಕೆ ನೀಡಿದ್ದರೆ, ಹರ್ಷ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿ ಗೊಂದಲ ಮೂಡಿಸಿದ್ದಾರೆ. ಈ ಎಲ್ಲದರ ನಡುವೆ ದರ್ಶನ್ ಮತ್ತೊಬ್ಬ ಆಪ್ತ ರಾಕೇಶ್ ಶರ್ಮಾ ಉಮಾಪತಿ ವಿರುದ್ಧ ಹೇಳಿಕೆ ನೀಡುವ ಮೂಲಕ ಹರ್ಷ ಪರ ನಿಂತಿದ್ದಾರೆ.
ಈ ಪ್ರಕರಣದ ಹಿಂದೆ ಯಾರದ್ದೋ ಕೈವಾಡ ಇದೆ. ಈ ಘಟನೆಯ ಬಳಿಕ ದರ್ಶನ್ ತುಂಬಾನೇ ಡಿಸ್ಟರ್ಬ್ ಆಗಿದ್ದಾರೆ ಎಂದು ರಾಕೇಶ್ ಶರ್ಮಾ ಹೇಳಿದ್ದಾರೆ. ಮಾತ್ರವಲ್ಲದೇ ಅರುಣಾ ಕುಮಾರಿಯನ್ನ ದರ್ಶನ್ಗೆ ಪರಿಚಯ ಮಾಡಿಸಿದ್ದೇ ಉಮಾಪತಿ ಎಂಬ ಹರ್ಷ ಮೆಲಿಂಡಾ ಹೇಳಿಕೆಗೆ ರಾಕೇಶ್ ಶರ್ಮಾ ಕೂಡ ದನಿಗೂಡಿಸಿದ್ದಾರೆ.
ಹರ್ಷ ಲೋನ್ಗೆ ಅಪ್ಲೈ ಮಾಡಿದ್ದಾರೆ. ಹೀಗಾಗಿ ನಿಮ್ಮ ದಾಖಲೆ ಪರಿಶೀಲನೆಗೆ ಬಂದಿದ್ದಾರೆ ಎಂದು ಉಮಾಪತಿ ದರ್ಶನ್ಗೆ ಹೇಳಿದ್ದರಂತೆ. ಹಾಗೂ ದರ್ಶನ್ಗೆ ಅರುಣಾ ಕುಮಾರಿಯನ್ನ ಸ್ವತಃ ಉಮಾಪತಿಯೇ ಪರಿಚಯ ಮಾಡಿಸಿದ್ದಾರೆ. ಹರ್ಷನ ಲೋನ್ಗೆ ನೀವೇ ಶ್ಯೂರಿಟಿ ನೀಡಿದ್ದೀರಿ ಎಂದು ಲೋನ್ ಬಗ್ಗೆ ದರ್ಶನ್ ಮುಂದೆ ಸ್ವತಃ ಉಮಾಪತಿ ಪ್ರಸ್ತಾಪ ಮಾಡಿದ್ದಾರೆ.
ಉಮಾಪತಿಯ ಮಾತನ್ನ ನಂಬಿದ್ದ ದರ್ಶನ್, ಅರುಣಾ ಕುಮಾರಿಯನ್ನ ಕಳುಹಿಸಿದ್ದರು. ಹಾಗೂ ಹರ್ಷಗೆ ಕರೆ ಮಾಡಿ ಈ ಬಗ್ಗೆ ಸ್ವತಃ ದರ್ಶನ್ ಮಾಹಿತಿ ನೀಡಿದ್ದರಂತೆ. ಇದರಿಂದ ಅನುಮಾನಗೊಂಡ ರಾಕೇಶ್ ಹಾಗೂ ಹರ್ಷ ಕೂಡಲೇ ತೋಟಕ್ಕೆ ಆಗಮಿಸಿದ್ದಾರೆ.
ಹರ್ಷ ಅರುಣಾ ಕುಮಾರಿ ಬಳಿ ನಿಮಗೆ ಹರ್ಷ ಎಂದರೆ ಯಾರೆಂದು ಗೊತ್ತಾ ಎಂದು ಕೇಳಿದ್ದಕ್ಕೆ ಅರುಣಾ ಕುಮಾರಿ ಹೌದು ಎಂದು ಉತ್ತರ ನೀಡಿದ್ದಳಂತೆ. ನಾನೇ ಹರ್ಷ ಎಂದು ಹೇಳುತ್ತಿದ್ದಂತೆ ಶಾಕ್ಗೊಳಗಾದ ಅರುಣಾ ಕುಮಾರಿ ಕೂಡಲೇ ತಮ್ಮ ಕಾರಿನತ್ತ ಓಡಿ ಹೋಗಿದ್ದಳಂತೆ.
ಅರುಣಾ ಕುಮಾರಿಯ ನಡವಳಿಕೆಯಿಂದ ಅನುಮಾನಗೊಂಡು ಕೆನರಾ ಬ್ಯಾಂಕ್ಗೆ ಕರೆ ಮಾಡಿ ವಿಚಾರಿಸಿದ ವೇಳೆ ಅರುಣಾ ಕುಮಾರಿ ಬ್ಯಾಂಕ್ ಸಿಬ್ಬಂದಿಯೇ ಅಲ್ಲ ಎಂಬ ವಿಚಾರ ತಿಳಿಯಿತು ಎಂದು ಹರ್ಷ ಹಾಗೂ ರಾಕೇಶ್ ಹೇಳುತ್ತಿದ್ದಾರೆ.
ಆದರೆ ಈ ಪ್ರಕರಣದಲ್ಲಿ ಉಮಾಪತಿ ಬೇರೆಯದ್ದೇ ಹೇಳಿಕೆ ನೀಡಿದ್ದಾರೆ. ಅರುಣಾ ಕುಮಾರಿಯ ಪತಿ ಹರ್ಷ ಬಳಿಯೇ ಕೆಲಸ ಮಾಡುತ್ತಿದ್ದರು . ಹೀಗಾಗಿ ಹರ್ಷ ಮೂಲಕವೇ ತಮಗೆ ಅರುಣಾ ಕುಮಾರಿ ಪರಿಚಯ ಎಂದು ಹೇಳ್ತಿದ್ದಾರೆ. ಒಟ್ನಲ್ಲಿ ದಚ್ಚು ಸ್ನೇಹಿತರ ಈ ಗೊಂದಲಮಯ ಹೇಳಿಕೆ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿದೆ. ಮಾತ್ರವಲ್ಲದೇ ದರ್ಶನ್ ಸ್ನೇಹದ ಲಾಭವನ್ನ ಪಡೆಯಲು ಯತ್ನಿಸಿದ್ದು ಯಾರೆಂಬ ಪ್ರಶ್ನೆ ಮೂಡಿದೆ.