ಗೋವಾ: ಕೋವಿಡ್ ಲಾಕ್ ಡೌನ್ ನಿಂದ ದೇಶದಲ್ಲಿ ಅನೇಕ ಜನರು ಕಷ್ಟಕ್ಕೀಡಾಗಿದ್ದಾರೆ. ಹಲವರು ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದರೆ, ಚಿಕ್ಕ ಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದವರು ಬಂಡವಾಳ ಹಾಕಿ ಲಾಭ ಬರದೆ ಕೈ ಸುಟ್ಟುಕೊಂಡಿದ್ದಾರೆ.
ಜೀವನೋಪಾಯಕ್ಕಾಗಿ ಇರೋಬರೋ ಆಸ್ತಿ, ಚಿನ್ನವನ್ನೂ ಅಡವಿಟ್ಟವರು ಹಲವರಿದ್ದಾರೆ. ಬಡವರು, ಮಧ್ಯಮವರ್ಗದ ಪಾಡು ಹೇಳತೀರದಾಗಿದೆ.
ಗೋವಾದ 50 ವರ್ಷದ ಮಾಣಿ ಪಾಲ್ ಎಂಬುವವರು ಕಳೆದ ವರ್ಷ ಕೆಲಸ ಕಳೆದುಕೊಂಡ ನಂತರ ಮಕ್ಕಳ ಶಿಕ್ಷಣಕ್ಕಾಗಿ ಹಣ ಪಾವತಿಸಲು ಚಿನ್ನಾಭರಣವನ್ನು ಅಡವಿಟ್ಟು ಸಾಲ ತೆಗೆದುಕೊಂಡಿದ್ದರು. ಈ ವರ್ಷ ಮತ್ತೆ ಲಾಕ್ ಡೌನ್ ಆದ ಪರಿಣಾಮವಾಗಿ ಸರಿಯಾದ ಕೆಲಸ ಸಿಗದೆ ಹಣವಿಲ್ಲದೆ ಕಂಗೆಟ್ಟ ಅವರು ಮನೆ ಖರ್ಚು ನಿಭಾಯಿಸಲು ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದಾರೆ.
ತಾನು ತೆಗೆದುಕೊಳುತ್ತಿರುವ ಎಲ್ಲಾ ಸಾಲದ ನಂತರ ಚಿನ್ನದ ಸಾಲವಾಗಿದೆ ಎಂದು ಅವರು ಹೇಳಿದ್ದಾರೆ. ಇದು ಮಾಣಿ ಪಾಲ್ ಒಬ್ಬರ ಸಮಸ್ಯೆಯಲ್ಲ. ದೇಶದ ಲಕ್ಷಾಂತರ ಜನರು ಅನೇಕ ರೀತಿಯಲ್ಲಿ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಕೆಲವರು ಆತ್ಮಹತ್ಯೆಯಂತಹ ದಾರಿ ತುಳಿದರೆ ಇನ್ನು ಕೆಲವರಿಗೆ ದಿಕ್ಕೇ ತೋಚದಂತಾಗಿದೆ.
ಗುಂಡಿ ಬಿದ್ದ ರಸ್ತೆ ರಿಪೇರಿಗೆ ಸ್ವಂತ ಜೇಬಿನಿಂದ ಮೂರು ಲಕ್ಷ ರೂಪಾಯಿ ಖರ್ಚು ಮಾಡಿದ ಪೊಲೀಸ್ ಅಧಿಕಾರಿ
ಇನ್ನು ಸಣ್ಣ-ಪುಟ್ಟ ವ್ಯಾಪಾರಕ್ಕೆ ಬಂಡವಾಳ ಹೂಡಿ ಲಾಕ್ ಡೌನ್ ಹೊಡೆತಕ್ಕೆ ನಷ್ಟವಾದ ಪರಿಣಾಮ ಸಾಲ ಮರುಪಾವತಿಸಲು ಕೆಲವರು ಅಡ್ಡದಾರಿಯೂ ಹಿಡಿದಿದ್ದಾರೆ. ಬೆಂಗಳೂರಿನಲ್ಲಿ ಮನೆ ಮಾಲಕಿಯನ್ನೇ ಕಟ್ಟಿ ಹಾಕಿ ಚಿನ್ನಾಭರಣಗಳನ್ನು ಸೋದರರಿಬ್ಬರು ದೋಚಿ ಪರಾರಿಯಾಗಿದ್ದ ಘಟನೆಯೂ ಇತ್ತೀಚೆಗಷ್ಟೇ ನಡೆದಿತ್ತು.
ಕೊರೋನಾ ಸಾಂಕ್ರಾಮಿಕದಿಂದ ಹಲವರು ಒಂದಲ್ಲ ಒಂದು ರೀತಿ ಕಷ್ಟ ಅನುಭವಿಸುತ್ತಿದ್ದಾರೆ. ಲಕ್ಷಾಂತರ ಜನರನ್ನು ಬಡತನ/ದಿವಾಳಿಯತ್ತ ತಳ್ಳುತ್ತಿದೆ. ವೈರಸ್ ನ ಕ್ರೂರ ಹೊಡೆತಕ್ಕೆ ಆರ್ಥಿಕತೆ, ಆದಾಯ ನೆಲಕಚ್ಚಿದೆ. ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕುಗಳು ಕಡಿಮೆಯಿರುವುದರಿಂದ ಹೆಚ್ಚಿನವರು ಚಿನ್ನವನ್ನು ಅಡವಿಡುತ್ತಿರುವುದು ಸಾಮಾನ್ಯವಾಗಿದೆ.