ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅನೇಕರು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಸೇರಿದಂತೆ ಇನ್ನೂ ಅನೇಕ ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನೀವು ಕೂಡ ಈ ರೀತಿ ಸಹಾಯವನ್ನ ಮಾಡಿದ್ದರೆ ಈ ದೇಣಿಗೆಗಳ ದಾಖಲೆಯನ್ನ ತೆರಿಗೆ ಪಾವತಿ ವೇಳೆ ನೀಡೋದನ್ನ ಮರೆಯಬೇಡಿ. ಈ ದಾಖಲೆಯನ್ನ ಸಲ್ಲಿಸುವ ಮೂಲಕ ತೆರಿಗೆಯಲ್ಲಿ ವಿನಾಯ್ತಿ ಪಡೆಯಬಹುದಾಗಿದೆ.
ತೆರಿಗೆ ಪಾವತಿ ಆ್ಯಕ್ಟ್ನ ಸೆಕ್ಷನ್ 80 ಜಿಯ ಪ್ರಕಾರ ಪರಿಹಾರ ನಿಧಿಗೆ ಹಾಗೂ ಚ್ಯಾರಿಟಿಗಳಿಗೆ ದೇಣಿಗೆ ರೂಪದಲ್ಲಿ ನೀಡುವ ಹಣದ ದಾಖಲೆಯನ್ನ ತೆರಿಗೆಯಿಂದ ವಿನಾಯಿತಿ ಪಡೆಯಲು ಬಳಸಿಕೊಳ್ಳಬಹುದಾಗಿದೆ. ಎಲ್ಲಾ ಕಡಿತಗಳು ಸೆಕ್ಷನ್ 80 ಜಿ ಅಡಿಯಲ್ಲಿ ಮಾನ್ಯವಾಗಿಲ್ಲ. ಹಳೆಯ ತೆರಿಗೆ ನಿಯಮವನ್ನ ಆರಿಸಿಕೊಂಡವರು ಈ ಕಡಿತವನ್ನ ಪಡೆಯಬಹುದಾಗಿದೆ.
ಆದರೆ ರಾಜಕೀಯ ಪಕ್ಷ ಅಥವಾ ವಿದೇಶಿ ಟ್ರಸ್ಟ್ಗೆ ನೀಡಿದ ಹಣವು ತೆರಿಗೆ ವಿನಾಯ್ತಿ ಪಡೆಯುವ ಅರ್ಹತೆ ಹೊಂದಿರೋದಿಲ್ಲ. ಆದರೆ ಪಿಎಂ ಕೇರ್ಸ್ ಫಂಡ್ಗೆ ನೀಡುವ ದೇಣಿಗೆಯು ಸೆಕ್ಷನ್ 80 ಜಿ ಅಡಿಯಲ್ಲಿ 100 ಪ್ರತಿಶತ ವಿನಾಯ್ತಿ ನೀಡುತ್ತದೆ.
2000 ರೂಪಾಯಿವರೆಗೆ ನಗದು ರೂಪದಲ್ಲಿ ದೇಣಿಗೆ ನೀಡಬಹುದು. ಆದರೆ ಇದಕ್ಕೂ ಹೆಚ್ಚಿನ ಮೊತ್ತವನ್ನ ಬ್ಯಾಂಕ್ ಖಾತೆ ವರ್ಗಾವಣೆ, ಚೆಕ್ ರೂಪದಲ್ಲಿಯೇ ನೀಡತಕ್ಕದ್ದು. ಆಹಾರ, ಬಟ್ಟೆ, ಔಷಧಿ ಈ ರೂಪಗಳಲ್ಲಿ ದೇಣಿಗೆ ನೀಡಿದ್ದರೆ ಇವುಗಳು ತೆರಿಗೆ ವಿನಾಯ್ತಿ ಪಡೆಯಲು ಅರ್ಹವಾಗೋದಿಲ್ಲ.