ಬೆಂಗಳೂರು: ಪಕ್ಷ ಬಿಟ್ಟು ಹೋದವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಹ್ವಾನ ವಿಚಾರವಾಗಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಹಾಗಾಗಿ ಯಾರೂ ಆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್ ಕಟೀಲ್, ಕಾಂಗ್ರೆಸ್ ಉಳಿಸಿಕೊಳ್ಳಲು ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಪಕ್ಷ ಬಿಟ್ಟು ಹೋದವರು ಸೇರಿದಂತೆ ಎಲ್ಲರನ್ನು ಆಹ್ವಾನ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಗೆ ಯಾರೂ ಅರ್ಜಿ ಹಾಕಲ್ಲ. ಕಾಂಗ್ರೆಸ್ ಮುಳುಗುವ ಹಡಗು. ಹಡಗಿಗೆ ತೂತು ಬಿದ್ದಿದೆ, ಹಾಗಾಗಿ ನೀರು ಒಳಗಡೆ ಸೇರುತ್ತಿದೆ. ಯಾವಾಗ ಮುಳುಗುತ್ತೆ ಗೊತ್ತಿಲ್ಲ, ಯಾರಾದ್ರೂ ರಕ್ಷಿಸಿ ಎಂದು ಕೈಚಾಚಿ ಕೇಳುತ್ತಿದ್ದಾರೆ ಎಂದರು.
ಬಿಜೆಪಿ – ಶಿವಸೇನೆ ಸಂಬಂಧವನ್ನು ಅಮೀರ್ – ಕಿರಣ್ ವಿಚ್ಚೇದನಕ್ಕೆ ಹೋಲಿಸಿದ ಸಂಜಯ್ ರಾವತ್
ಇಂದು ಯಾರೊಬ್ಬರೂ ಕಾಂಗ್ರೆಸ್ ಪಕ್ಷ ಸೇರುವವರಿಲ್ಲ. ಹಾಗಾಗಿ ಯಾವ ಪಕ್ಷದಲ್ಲಿದ್ದರೂ ಒಂದು ಸಲ ವಾಪಸ್ ಬಂದು ನಮ್ಮನ್ನು ರಕ್ಷಣೆ ಮಾಡಿ ಎಂದು ಡಿ.ಕೆ. ಶಿವಕುಮಾರ್ ಕರೆಯುತ್ತಿದ್ದಾರೆ ಎಂದು ಕುಟುಕಿದರು.
ಇನ್ನು ಸಿಎಂ ಬದಲಾವಣೆ ವಿಚಾರವಾಗಿ ಸಿ.ಪಿ. ಯೋಗೇಶ್ವರ್ ಹಾಗೂ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್, ದಾರಿಯಲ್ಲಿ ನಿಂತು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ ಮಾತ್ರಕ್ಕೆ ಬದಲಾವಣೆಯಾಗಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲವೂ ನಿರ್ಧಾರವಾಗುತ್ತೆ. ಅನಗತ್ಯವಾಗಿ ಬದಲಾವಣೆ ಗೊಂದಲ ಬೇಡ ಎಂದರು. ಇನ್ನು ಸಿ.ಪಿ. ಯೋಗೇಶ್ವರ್ ಹೇಳಿಕೆಗಳಿಗೆ ಅವರನ್ನೇ ಕೇಳಿ ವಿಚಾರಿಸುತ್ತೇನೆ ಎಂದು ಹೇಳಿದರು.