ಉತ್ತರಾಖಂಡ್ನ ಜ್ವಾಲಾಪುರದ ಬಿಜೆಪಿ ಶಾಸಕ ಸುರೇಶ್ ರಾಥೋರ್ಗೆ ಸಂಕಷ್ಟ ಶುರುವಾಗಿದೆ. ಬೇಗಂಪುರ ಗ್ರಾಮದ ನಿವಾಸಿ ಪಕ್ಷದ ಮಹಿಳಾ ಕಾರ್ಯಕರ್ತೆ ಸುರೇಶ್ ರಾಥೋರ್ ವಿರುದ್ಧ ಅತ್ಯಾಚಾರದ ಆರೋಪವನ್ನ ಹೊರಿಸಿದ್ದಾರೆ.
ಪ್ರಕರಣ ಸಂಬಂಧ ಮಾತನಾಡಿದ ಹರಿದ್ವಾರ ಎಸ್ಎಸ್ಪಿ ಅಬುದೈ ಕೃಷ್ಣರಾಜ್, ಪ್ರಕರಣ ಸಂಬಂಧ ಕೋರ್ಟ್ನ ಸೂಚನೆಯಂತೆ ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ 156(ಸಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದು ಮಾತ್ರವಲ್ಲದೇ ಐಪಿಸಿ ಸೆಕ್ಷನ್ 376, 504, 506ರ ಅಡಿಯಲ್ಲಿಯೂ ಕೇಸ್ ದಾಖಲಿಸಲಾಗಿದೆ ಎಂದು ಹೇಳಿದ್ರು.
ಕೆಲವು ತಿಂಗಳ ಹಿಂದೆ ಶಾಸಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಹಾಗೂ ಈ ವಿಚಾರವನ್ನ ಯಾರಿಗೂ ಹೇಳದಂತೆ ನನಗೆ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ.
ಆದರೆ ಈ ಎಲ್ಲಾ ಆರೋಪಗಳನ್ನ ತಳ್ಳಿ ಹಾಕಿರುವ ಬಿಜೆಪಿ ಶಾಸಕ ನನ್ನ ಜೀವ ಅಪಾಯದಲ್ಲಿದ್ದು ನನಗೆ ಪೊಲೀಸ್ ರಕ್ಷಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ನಾನು ಅಪಾಯದಲ್ಲಿದ್ದೇನೆ. ನಾನು ಇದನ್ನ ಈ ಹಿಂದೆ ಕೂಡ ಹೇಳಿದ್ದೆ. ಸುಲಿಗೆ ಆರೋಪದಡಿಯಲ್ಲಿ ಜೈಲಿಗೆ ಹೋಗಿಬಂದವರು ಈಗ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನ ಹೊರಿಸಲಾಗ್ತಾ ಇದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ನಾನು ಪೊಲೀಸರಲ್ಲಿ ಮನವಿ ಮಾಡುತ್ತಿದ್ದೇನೆ. ಕೂಡಲೇ ಸತ್ಯ ಬಹಿರಂಗ ಮಾಡಿ ಎಂದು ರಾಥೋಡ್ ಹೇಳಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಶಾಸಕ ರಾಥೋಡ್ ಹಾಗೂ ಮಹಿಳೆ ಕಳೆದ ಎರಡೂವರೆ ವರ್ಷಗಳಿಂದ ಒಬ್ಬರನ್ನೊಬ್ಬರು ಬಲ್ಲವರಾಗಿದ್ದರು. ಬಳಿಕ ರಾಥೋಡ್ರೇ ಈಕೆಯನ್ನ ಬಿಜೆಪಿ ಮಹಿಳಾ ಮೋರ್ಛಾಗೆ ಸೇರ್ಪಡೆಯಾಗುವಂತೆ ಹೇಳಿದ್ದರು. ಈ ಹಿಂದೆ ಜ್ವಾಲಾಪುರ ಪಂಚಾಯ್ತಿ ಅಧ್ಯಕ್ಷೆಯಾಗಿದ್ದ ಈ ಮಹಿಳೆ ಇದೀಗ ಶಾಸಕರ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಾಳೆ.