ದೇಹದ ಯಾವುದೇ ಅಂಗಕ್ಕೆ ಚಿಕ್ಕ ಹಾನಿಯಾದರೂ ಸಾಕು ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ಅಂತದ್ರಲ್ಲಿ ಸ್ಟಾನ್ ಲಾರ್ಕಿನ್ ಎಂಬಾತ 1 ವರ್ಷಕ್ಕೂ ಅಧಿಕ ಕಾಲ ದೇಹದಲ್ಲಿ ಹೃದಯವೇ ಇಲ್ಲದೇ ಜೀವನ ನಡೆಸಿದ್ದ ಎಂದು ಹೇಳಿದ್ರೆ ನೀವು ನಂಬಲೇಬೇಕು..!
ಈ ಯುವಕನ ಕತೆ ವೈದ್ಯಲೋಕಕ್ಕೆ ಸವಾಲಾಗಿದ್ದು ಒಂದೆಡೆಯಾದರೆ ಸಾಮಾನ್ಯ ಜನತೆಯ ಕಣ್ಣಲ್ಲಿ ಈ ನೋವಿನ ಜೀವನ ಕಣ್ಣೀರು ತರಿಸುವಂತಿದೆ.
ಒಂದು ವರ್ಷಕ್ಕೂ ಅಧಿಕ ಕಾಲ ದೇಹದಲ್ಲಿ ಹೃದಯವೇ ಇಲ್ಲದೇ ಇದ್ದರೂ ಸಹ ಈತ ಸ್ನೇಹಿತರ ಜೊತೆ ವಿವಿಧ ಚಟುವಟಿಕೆಗಳಿಗೆ ಸಕ್ರಿಯವಾಗಿ ಭಾಗಿಯಾಗುತ್ತಿದ್ದ. ಲಾರ್ಕಿನ್ 2016ರಲ್ಲಿ 25 ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಈತನಿಗೆ ಹೃದಯದ ಕಸಿ ಮಾಡಲಾಯ್ತು. ಆದರೆ ಅಲ್ಲಿಯವರೆಗೆ ದಾನಿಗಾಗಿ ಕಾಯುತ್ತಿದ್ದ ಲಾರ್ಕಿನ್ ಸಿಂಕ್ ಅರ್ಕಾಡಿಯಾ ಎಂಬ ಸಾಧನದ ಮೂಲಕ ಉಸಿರಾಡುತ್ತಿದ್ದ ಎನ್ನಲಾಗಿದೆ.
ಈ ಸಾಧನವು ಹೃದಯದಂತೆಯೇ ಕಾರ್ಯವನ್ನ ನಿರ್ವಹಿಸುತ್ತದೆ. ಈ ಕೃತಕ ಹೃದಯವನ್ನ ಲಾರ್ಕಿನ್ 555 ದಿನಗಳ ಕಾಲ ಬಳಕೆ ಮಾಡಿದ್ದ ಎನ್ನಲಾಗಿದೆ. ಇದು ಹೃದಯದಂತೆ ಕಾರ್ಯನಿರ್ವಹಿಸುತ್ತೆ. ಆದರೂ ಇದನ್ನ ಶಾಶ್ವತ ಪರಿಹಾರವಾಗಿ ಪರಿಗಣಿಸಲು ಸಾಧ್ಯವಿಲ್ಲ. 13.5 ಪೌಂಡ್ ತೂಕವಿದ್ದ ಈ ಸಾಧನವನ್ನ ಬೆನ್ನಿಗೆ ಹಾಕಿಕೊಳ್ತಿದ್ದ ಲಾರ್ಕಿನ್ ಈಗ ಎಲ್ಲರಂತೆ ಹೃದಯವನ್ನ ಹೊಂದಿದ್ದಾನೆ. ಈ ಬಗ್ಗೆ ಲಾರ್ಕಿನ್ ಮಿಚಿಗನ್ ಯೂನಿವರ್ಸಿಟಿ ಒಂದರಲ್ಲಿ ಮಾಹಿತಿ ನೀಡಿದ್ದ ಎನ್ನಲಾಗಿದೆ.